ಉಳ್ಳಾಲ, ಏ.04(DaijiworldNews/TA) : ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ರಸ್ತೆಯುದ್ದಕ್ಕೂ ದಟ್ಟವಾದ ಹೊಗೆಯು ಆವರಿಸಿ ಎರಡು ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ವಸತಿ ನಿಲಯದ ಬಳಿಯ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.



ಕೊಣಾಜೆಯಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಹಾಗೂ ಇನೋಳಿಗೆ ತೆರಳುವ ಬಿಐಟಿ ಕಾಲೇಜಿನ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಎರಡು ಬಸ್ಸಿನ ಚಾಲಕರು ಹಾಗೂ ಪ್ರಯಾಣಿಕರಿಗೆ ಅಲ್ಪ ಸ್ವಲ್ಪ ಗಾಯಗಳಾಗಿದೆ. ಕೊಣಾಜೆಯ ವಿಶ್ವವಿದ್ಯಾಲಯದ ಬಳಿ ರಸ್ತೆಯ ಬದಿಯ ಗುಡ್ಡ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ಗಿಡಮರಗಳು, ಗಿಡಗಂಟಿಗಳು ಬೆಂಕಿಗಾಹುತಿಯಾಗಿ ದಟ್ಟವಾದ ಹೊಗೆಯು ಪರಿಸರದಲ್ಲಿ ಆವರಿಸಿತ್ತು. ಅಲ್ಲದೆ ರಸ್ತೆಯ ಉದ್ದಕ್ಕೂ ಬೆಂಕಿಯ ಕೆನ್ನಾಲೆಯೊಂದಿಗೆ ಹೊಗೆಯೂ ಆವರಿಸಿದ ಪರಿಣಾಮ ವಾಹನ ಸವಾರರಿಗೂ ತೊಂದರೆಯಾಗಿತ್ತು. ಇದರ ನಡುವೆ ಎರಡು ಕಡೆಯಿಂದ ಬರುವ ಬಸ್ ನ ಚಾಲಕರಿಗೆ ಕಾಣದೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಅಪಘಾತದ ಪರಿಣಾಮ ಎರಡು ಬಸ್ ಗಳ ಮುಂಭಾಗವು ನಜ್ಜುಗುಜ್ಜಾಗಿದೆ. ಮಂಗಳೂರು ವಿವಿ ಪರಿಸರದ ಆವರಣದಲ್ಲಿ ಗುಡ್ಡ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಗುಡ್ಡಕ್ಕೆ ಬೆಂಕಿ ಬಿದ್ದು ನೂರಾರು ಗಿಡಮರಗಳು ನಾಶವಾಗಿವೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದ್ದಾರೆ.