ಮಾಸ್ಕೋ, ಆ. 12 (DaijiworldNews/MB) : ವಿಶ್ವದ ಮೊದಲ ಕೊರೊನಾ ಲಸಿಕೆಯನ್ನು ಇನ್ನೆರಡು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಷ್ಯಾ ಆರೋಗ್ಯ ಸಚಿವ ಮಿಖೈಲ್ ಮುರಾಶ್ಕೋ ಬುಧವಾರ ತಿಳಿಸಿದ್ದಾರೆ.
ವಿಶ್ವದ ಮೊದಲ ಕೊರೊನಾ ವೈರಸ್ನ ಲಸಿಕೆಯನ್ನು ಮಂಗಳವಾರ ರಷ್ಯಾ ನೋಂದಣಿ ಮಾಡಿದ್ದು ಈ ಲಸಿಕೆಯನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಿಗೆ ಪ್ರಯೋಗ ಮಾಡಲಾಗಿತ್ತು. ಹಾಗೆಯೇ ಈ ಲಸಿಕೆಗೆ ''ಸ್ಪುಟ್ನಿಕ್ ವಿ'' ಎಂದು ನಾಮಕರಣ ಮಾಡಲಾಗಿದೆ.
ಇದೀಗ ಮಾಹಿತಿ ನೀಡಿರುವ ರಷ್ಯಾ ಆರೋಗ್ಯ ಸಚಿವ ಮಿಖೈಲ್ ಮುರಾಶ್ಕೋ ಅವರು, ''ಇನ್ನೆರಡು ವಾರದಲ್ಲಿ ಕೊರೊನಾ ಲಸಿಕೆಯ ಮೊದಲ ಬ್ಯಾಚ್ ಬಿಡುಗಡೆ ಮಾಡಲಾಗುವುದು. ಹಾಗೆಯೇ ಈ ಲಸಿಕೆಯನ್ನು ತೆಗೆದುಕೊಳ್ಳುವುದು ಅವರವರ ಇಚ್ಛೆಗೆ ಬಿಟ್ಟಿರುವುದಾಗಿದೆ. ರೋಗ ನಿಯಂತ್ರಕ ಶಕ್ತಿ ಅಧಿಕವಾಗಿರುವವರು ಈ ಲಸಿಕೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂಬುದು ಕೆಲವು ವೈದ್ಯರ ಅಭಿಪ್ರಾಯವಾಗಿದೆ'' ಎಂದು ಹೇಳಿದ್ದಾರೆ.
''ಮೊದಲು ರಷ್ಯಾದ ಸೋಂಕಿತರಿಗೆ ಆದ್ಯತೆ ನೀಡಿ ಬಳಿಕ ಬೇರೆ ದೇಶಗಳಿಗೆ ರಫ್ತು ಮಾಡಲಾಗುವುದು. ನಮ್ಮ ಮೊದಲ ಆದ್ಯತೆ ಸ್ಥಳೀಯ ಮಾರುಕಟ್ಟೆಯಾಗಿದೆ'' ಎಂದಿದ್ದಾರೆ.
ಇನ್ನು ಲಸಿಕೆ ಯೋಜನೆಗೆ ನೇರ ಬಂಡವಾಳ ಹೂಡಿಕೆಯ ಮುಖ್ಯಸ್ಥರಾಗಿರುವ ಕಿರಿಲ್ ಡಿಮಿಟ್ರಿಯೆವ್, "ಲಸಿಕೆ ಪ್ರಾರಂಭಿಕವಾಗಿ 20 ರಾಷ್ಟ್ರಗಳಿಂದ ಒಂದು ಬಿಲಿಯನ್ ಡೋಸ್ನಷ್ಟು ಬೇಡಿಕೆಯನ್ನು ಪಡೆದಿದ್ದೇವೆ. ವಿದೇಶಿ ಪಾಲುದಾರರೊಂದಿಗೆ ರಷ್ಯಾ 500 ಮಿಲಿಯನ್ ಡೋಸ್ನಷ್ಟು ಲಸಿಕೆಯನ್ನು ಪ್ರತಿ ವರ್ಷ 5 ರಾಷ್ಟ್ರಗಳಲ್ಲಿ ತಯಾರಿಸಲು ಸಿದ್ಧ. ಫೇಸ್ 3 ಟ್ರಯಲ್ ಗಳು ಬುಧವಾರದಿಂದ ಪ್ರಾರಂಭವಾಗಲಿದೆ'' ಎಂದು ಹೇಳಿದ್ದರು.