ಇಸ್ಲಾಮಾಬಾದ್, ಆ 3(DaijiworldNews/HR): ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿಯಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ತಮ್ಮ ಅಪರಾಧದ ವಿರುದ್ಧ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದು ಅದನ್ನು ಪ್ರತಿನಿಧಿಸಲು ಭಾರತವೇ ವಕೀಲರನ್ನು ನೇಮಿಸಬೇಕು ಎಂದು ಪಾಕಿಸ್ತಾನ ನ್ಯಾಯಾಲಯ ತಿಳಿಸಿದೆ.
ಮುಖ್ಯವಾಗಿ ಜಾಧವ್ ಅವರನ್ನು ಪ್ರತಿನಿಧಿಸುವ ವಕೀಲರು ಪಾಕಿಸ್ತಾನಿ ಪ್ರಜೆಯಾಗಿರಬೇಕು ಎಂದು ಷರತ್ತು ವಿಧಿಸಿದ ಇಸ್ಲಾಮಾಬಾದ್ ಹೈಕೋರ್ಟ್ ವಿಶೇಷ ನ್ಯಾಯಪೀಠ ಜಾಧವ್ನನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸಲು ಭಾರತದ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿ ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. ವಕೀಲರನ್ನು ನೇಮಿಸಲು ಜಾಧವ್ ಅವರಿಗೆ ಎರಡನೇ ಅವಕಾಶ ನೀಡಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್, ಫೆಡರಲ್ ಸರ್ಕಾರ ಸ್ವತಃ ವಕೀಲರನ್ನು ಪ್ರತಿನಿಧಿಯನ್ನಾಗಿಸಬೇಕೆಂದು ಬಯಸುತ್ತದೆ. ಪಾಕಿಸ್ತಾನಿ ಸಲಹೆಗಾರರಿಗೆ ಭಾರತೀಯ ವಕೀಲರು ಸಹಾಯ ಮಾಡಬಹುದೇ ಎಂಬುದರ ಬಗ್ಗೆ ಈವರೆಗೂ ತೀರ್ಮಾನಿಸಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಪ್ರಕರಣವನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದೆ.