ಅಲಾಸ್ಕ, ಆ 01 (DaijiworldNews/PY): ವಿಮಾನಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಶಾಸಕ ಸೇರಿ ಏಳು ಮಂದಿ ಮೃತಪಟ್ಟಿರುವ ಘಟನೆ ಶುಕ್ರವಾರ ಅಮೆರಿಕದ ಅಲಾಸ್ಕದ ಕೆನೈ ಪೆನಿನ್ಸುಲಾದ ಸೋಲ್ಡೊಟ್ನಾ ನಗರದ ವಿಮಾನ ನಿಲ್ದಾಣದ ಸಮೀಪದಲ್ಲಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ವಿಮಾನ ಪತನದಲ್ಲಿ ಮೃತಪಟ್ಟವರನ್ನು ಶಾಸಕ ಗ್ಯಾರಿ ನೂಪ್, ಪೈಲಟ್ ಗ್ರೆಗೋರಿ ಬೆಲ್ (67), ಗೈಡ್ ಡೇವಿಡ್ ರೋಜರ್ಸ್ (40) ಮತ್ತು ಸೌಥ್ ಕರೊಲಿನಾ ಪ್ರವಾಸಿಗರಾದ ಕಲೆಬ್ ಹಸ್ಲಿ (26), ಹೆದರ್ ಹಸ್ಲಿ (25), ಮೆಕಾಯ್ ಹಸ್ಲಿ (24) ಮತ್ತು ಕ್ರಿಸ್ಟಿ ರೈಟ್ (23) ಎಂದು ಗುರುತಿಸಲಾಗಿದೆ.
ಎರಡು ವಿಮಾನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಯಾರೂ ಕೂಡಾ ಬದುಕುಳಿದಿಲ್ಲ. ಅಲಾಸ್ಕಾ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಗ್ಯಾರಿ ನೂಪ್ ವಿಮಾನವೊಂದರಲ್ಲಿ ಏಕಾಂಗಿಯಾಗಿ ವಾಪಾಸ್ಸಾಗುತ್ತಿದ್ದರು. ಇನ್ನೊಂದು ವಿಮಾನವು ಅಲಾಸ್ಕಾ ಕಡೆಗೆ ಸೌಥ್ ಕರೊಲಿನಾದಿಂದ ಬರುತ್ತಿದ್ದು, ಈ ವಿಮಾನದಲ್ಲಿ ನಾಲ್ಕು ಪ್ರವಾಸಿಗರು ಸೇರಿದಂತೆ ಓರ್ವ ಗೈಡ್ ಮತ್ತು ಪೈಲಟ್ ಇದ್ದರು.
ಮಾಯು ಮಾರ್ಗದ ನಡುವೆ ಎರಡು ವಿಮಾನಗಳ ಮುಖಾಮುಖಿ ಡಿಕ್ಕಿಯ ಪರಿಣಾಮ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಓರ್ವನನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಮೃತ ಶಾಸಕ ಗ್ಯಾರಿ ನೂಪ್ ಅವರು ಓರ್ವ ರಿಪಬ್ಲಿಕನ್ ಹಾಗೂ ರಾಜ್ಯ ಸದನದ ಉಭಯ ಪಕ್ಷೀಯ ಬಹುಮತದ ಸದಸ್ಯರಾಗಿದ್ದರು. ಇವರ ಈ ದುರಂತ ಸಾವಿಗೆ ಹಲವಾರ ಸಹೋದ್ಯೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇವರು ತಮ್ಮ ಪ್ರದೇಶದ ಅಭಿವೃದ್ದಿಗಾಗಿ ದುಡಿಯುತ್ತಿದ್ದು, ಇಂತಹ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸಹೋದ್ಯೋಗಿಗಳು ದುಃಖಿತರಾಗಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ.
2019ರ ಮೇ ತಿಂಗಳಿನಲ್ಲಿ ಕೆಟ್ಟಿಕನ್ ಬಳಿ ವಿಮಾನಗಳ ಡಿಕ್ಕಿ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದು, 10 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು.