ವಾಷಿಂಗ್ಟನ್, ಜು 31 (DaijiworldNews/PY): ದೇಶದಲ್ಲಿ ಕೊರೊನಾ ವೈರಸ್ ಹೆಚ್ಚುತ್ತಿದೆ. ಚುನಾಣೆಯ ಸಂದರ್ಭ ನಕಲಿ ಮತದಾನವಾಗುವ ಸಾಧ್ಯತೆ ಇರುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದು, ನಿಗದಿಯಾಗಿರುವ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವ ಬಗ್ಗೆ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೇಲ್-ಇನ್ ಮತದಾನದೊಂದಿಗೆ, 2020 ಇತಿಹಾಸದಲ್ಲಿ ಅತ್ಯಂತ ಕೆಟ್ಟದಾದ ಹಾಗೂ ಮೋಸದ ಚುನಾವಣೆಯಾಗಿದೆ. ಈ ಚುನಾವಣೆಯು ಅಮೆರಿಕಕ್ಕೆ ದೊಡ್ಡ ಮುಜುಗರವನ್ನುಂಟು ಮಾಡುತ್ತದೆ. ಜನರು ಸರಿಯಾಗಿ, ಸುರಕ್ಷಿತವಾಗಿ ಮತ ಚಲಾಯಿಸುವವರೆಗೆ ಚುನಾವಣೆಯನ್ನು ಮುಂದೂಡಬಹುದೇ??? ಎಂದು ಕೇಳಿದ್ದಾರೆ.
ಚುನಾವಣೆಯನ್ನು ನಾನು ಮುಂದೂಡಲು ಇಚ್ಛಿಸುತ್ತೇನೆಯೇ? ಇಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಾಗುವ ಅಕ್ರಮವನ್ನು ನಾನು ನೋಡುವುದಿಲ್ಲ. ಚುನಾವಣೆಯ ವೇಳೇ ಅಕ್ರಮ ನಡೆದಲ್ಲಿ ಈ ಚುನಾವಣೆಯು ಇತಿಹಾಸದಲ್ಲಿ ಅತ್ಯಂತ ಕೆಟ್ಟದಾದ ಚುನಾವಣೆಯಾಗಿ ಉಳಿಯಲಿದೆ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನವೆಂಬರ್ 3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್ ಅವರನ್ನು ಡೊನಾಲ್ಡ್ ಟ್ರಂಪ್ ಅವರು ಎದುರಿಸಲಿದ್ದಾರೆ. ಪ್ರಸ್ತುತ ನಿಗದಿಯಾಗಿರುವ ಚುನಾವಣೆಯನ್ನು ಮುಂದೂಡುವ ಯಾವುದೇ ರೀತಿಯಾದ ಸಾಂವಿಧಾನಿಕ ಅಧಿಕಾರವನ್ನು ಟ್ರಂಪ್ ಅವರು ಹೊಂದಿಲ್ಲದ ಕಾರಣ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡುವಂತ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಕೊರೊನಾದ ಸಂದರ್ಭ ಮತದಾರರನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್-ಇನ್ ಮತದಾನವನ್ನು ಈ ರೀತಿಯಾಗಿ ಬಳಸಿಕೊಂಡಲ್ಲಿ ಸಾಮೂಹಿಕ ವಂಚನೆಗೆ ಇದು ಕಾರಣವಾಗುತ್ತದೆ ಎನ್ನುವ ಅವರ ಸಮರ್ಥನೆಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹಲವರು ಮಾತನಾಡಿದ್ದಾರೆ.