ವಾಷಿಂಗ್ಟನ್, ಜು 29 (DaijiworldNews/PY): ಅಮೆರಿಕ ಸೆನೆಟರ್ ಹುದ್ದೆ ಸ್ಪರ್ಧಿಸುತ್ತಿರುವುದು ನನಗೆ ದೊರೆತ ಅಪರೂಪವಾದಂತ ಅವಕಾಶ ಎಂದು ಭಾರತ ಮೂಲದ ವೈದ್ಯ ಡಾ.ಮನೀಶ್ ಕುಮಾರ್ ಸೇಥ್ ಹೇಳಿದ್ದಾರೆ.
ಸೇಥ್ ಅವರ ಚುನಾವಾಣೆಯ ಪ್ರಮುಖ ವಿಷಯಗಳೆಂದರೆ, ಉದ್ಯೋಗ ಸೃಷ್ಠಿ, ವಲಸೆ ನೀತಿಯನ್ನು ಸರಿಪಡಿಸುವುದು ಅಲ್ಲದೇ, ಭಾರತದೊಂದಿಗೆ ಸಂಬಂಧ ಸುಧಾರಿಸುವುದು. ಪ್ರಾಥಮಿಕ ಚುನಾವಣೆಗೆಂದು ಕಳೆದ ವಾರ ಸೇಥ್ ಅವರ ಉಮೇದುದಾರಿಕೆಯನ್ನು ಬೆಂಬಲಿಸಿದ್ದ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸೆನೆಟರ್ ಟೆಡ್ ಕ್ರೂಸ್ ಅವರು ಪ್ರಚಾರವನ್ನು ಕೂಡಾ ಮಾಡಿದ್ದರು.
ಭಾರತವು ಅಪ್ರತಿಮವಾದ ಮಿತ್ರದೇಶವಾಗಿದೆ. ಅಲ್ಲದೇ, ಅಮೆರಿಕದ ಅಭೂತಪೂರ್ವ ಪಾಲುದಾರ ದೇಶವೂ ಆಗಿದೆ. ಉಭಯ ದೇಶಗಳ ಮೈತ್ರಿ ಯಾವಾಗಲೂ ಉತ್ತಮವಾಗಿರಬೇಕು ಎಂದು ಬಯಸುತ್ತೇನೆ. ಸೆನೆಟರ್ ಹುದ್ದೆ ಸ್ಪರ್ಧಿಸುತ್ತಿರುವುದು ನನಗೆ ದೊರೆತ ಅಪರೂಪವಾದಂತ ಅವಕಾಶವಾಗಿದೆ ಎಂದು ಸೇಥ್ ತಿಳಿಸಿದ್ದಾರೆ.
1970ರ ದಶಕಲ್ಲಿ ಭಾರತದ ಮೂಲದ ನನ್ನ ಪೋಷಕರು ಅಮೆರಿಕಕ್ಕೆ ಬಂದಿದ್ದರು. ನನ್ನ ಪೋಷಕರಿಬ್ಬರೂ ವೃತ್ತಿಯಲ್ಲಿ ವೈದ್ಯರು. ಒಹಿಯೋದ ಕ್ಲೀವ್ಲ್ಯಾಂಡ್ನಲ್ಲಿ ನಾನು ಹುಟ್ಟಿದ್ದು, ನಂತರದ ದಿನಗಳಲ್ಲಿ ನಾವು ಟೆನ್ನೆಸ್ಸಿಗೆ ಸ್ಥಳಾಂತರವಾದೆವು ಎಂದಿದ್ದಾರೆ.
ಇನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರು ರಿಪಬ್ಲಿಕನ್ ಪಕ್ಷದ ಮತ್ತೋರ್ವ ಸ್ಪರ್ಧಿಯಾದ ಬಿಲ್ ಹ್ಯಾಗರ್ಟಿ ಅವರ ಉಮೇದುವಾರಿಕೆಯನ್ನು ಅನುಮೋದಿಸಿದ್ದಾರೆ.
ಬಿಲ್ ಹ್ಯಾಗರ್ಟಿ ಅವರಿಗಿಂತ ಮನೀಶ್ ಕುಮಾರ್ ಸೇಥ್ ಅವರು ಜನಮತಗಣನೆಯಲ್ಲಿ ಮುಂದಿದ್ದಾರೆ.