ಕಾರ್ಪಸ್ ಕ್ರಿಸ್ಟಿ, ಜು. 28 (DaijiworldNews/MB) : ಅಮೆರಿಕಕ್ಕೆ ಮೆಕ್ಸಿಕೋದಿಂದ ಅಕ್ರಮವಾಗಿ ವಲಸೆ ಬರುವವರನ್ನು ತಡೆಯಲೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ರ ಮಹತ್ವಾಕಾಂಕ್ಷಿ ಯೋಜನೆಯಂತೆ ನಿರ್ಮಿಸಲಾದ ತಡೆಗೋಡೆಯ ಭಾಗ ಹೆನ್ನಾ ಚಂಡಮಾರುತದಿಂದ ತೀವ್ರ ಮಳೆಯಿಂದಾಗಿ ಕುಸಿದಿದೆ.
ಕೆಲದಿನಗಳ ಹಿಂದೆ ಈ ಯೋಜನೆಯ ಬಗ್ಗೆ ಮಾತನಾಡಿದ್ದ ಟ್ರಂಪ್, ಗಡಿ ಭಾಗದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿಶ್ವದ ಬಲಿಷ್ಟ ಯೋಜನೆ ಇದಾಗಿದೆ ಎಂದು ಹೇಳಿಕೊಂಡಿದ್ದು ಅಕ್ಟೋಬರ್-ನವೆಂಬರ್ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇದೀಗ ಈ ಉಕ್ಕಿನಿಂದ ನಿರ್ಮಿಸಲಾಗಿರುವ ಗೋಡೆ ಕುಸಿತವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಗೋಡೆ ಕುಸಿತದ ವಿಷಯವನ್ನು ಮುಂದಿಟ್ಟುಕೊಂಡು ಹಲವರು ಟ್ರಂಪ್ ಅವರನ್ನು ವ್ಯಂಗ್ಯ ಮಾಡುತ್ತಿದ್ದಾರೆ.
ಅಮೆರಿಕಕ್ಕೆ ಮೆಕ್ಸಿಕೋದಿಂದ ಬರುವ ಅಕ್ರಮ ವಲಸಿಗರನ್ನು ತಡೆಯಲೆಂದು ಸುಮಾರು 1.61 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಈ ತಡೆಗೋಡೆಯ ನಿರ್ಮಾಣದ ಘೋಷಣೆಯನ್ನು ಟ್ರಂಪ್ ಮಾಡಿದ್ದು ಈಗಾಗಲೇ 82,200 ಕೋಟಿ ರೂ. ಮೊತ್ತ ವ್ಯಯ ಮಾಡಲಾಗಿದೆ. ಆದರೆ ಈಗ ಗೋಡೆಯ ಭಾಗ ಕುಸಿದು ಬಿದ್ದಿದೆ.
ವಿಡಿಯೋದಲ್ಲಿ ಭಾರೀ ಬಿರುಗಾಳಿ, ಮಳೆಗೆ ಗೋಡೆಯ ಒಂದು ಭಾಗವು ಬಾಗಿದ್ದು ಉಕ್ಕಿನಿಂದ ನಿರ್ಮಿಸಿರುವ ಗೋಡೆ ನೆಲಕ್ಕೆ ಕುಸಿದಿದೆ. ಇದನ್ನು ಅಲ್ಲಿರುವ ಕಾರ್ಮಿಕರು ನಿಂತು ನೋಡುತ್ತಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಇನ್ನು 100 ದಿನಗಳು ಉಳಿದಿರುವಾಗ ಕೊರೊನಾ, ಪ್ರತಿಭಟನೆ ಮೊದಲಾದ ಘಟನೆಗಳು ನಡೆಯುತ್ತಿದ್ದು ಸಮೀಕ್ಷೆಯ ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.