ಕೈರೊ, ಜು 27 (DaijiworldNews/PY): ಸೂಡಾನ್ ಯುದ್ದ ಪೀಡಿತ ಡಾರ್ಫರ್ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 60 ಮಂದಿ ಸಾವನ್ನಪ್ಪಿರುವುದಾಗಿ ವಿಶ್ವಸಂಸ್ಥೆ ಹೇಳಿದೆ.
ಪಶ್ಚಿಮ ಡಾರ್ಫರ್ ಪ್ರಾಂತ್ಯದ ಮಸ್ಟೆರಿ ಹಳ್ಳಿಯ ಮೇಲೆ ಸುಮಾರು 500 ಮಂದಿ ಸಶಸ್ತ್ರ ವ್ಯಕ್ತಿಗಳು ಶನಿವಾರ ದಾಳಿ ನಡೆಸಿದ್ದಾರೆ ಎಂದು ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೂಲಗಳು ಮಾಹಿತಿ ನೀಡಿವೆ.
ಈ ಸಂಘರ್ಷವು ಮಸಲಿತ್ ಹಾಗೂ ಅರಬ್ ಬುಡಕಟ್ಟು ಸಮುದಾಯದವರ ಮಧ್ಯೆ ನಡೆದಿದೆ. ಡಾರ್ಫರ್ ಪ್ರದೇಶದಲ್ಲಿ ನಡೆದಿರುವ ಈ ಸಂಘರ್ಷವನ್ನು ನಿಯಂತ್ರಿಸಲು ಸೇನಾಪಡೆಯನ್ನು ನಿಯೋಜನೆ ಮಾಡುವಂತೆ ಸ್ಥಳೀಯ ಆಡಳಿತ ಮನವಿ ಮಾಡಿರುವುದಾಗಿ ಸ್ಥಳೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಮಸಲಿತ್ ಸುಲ್ತಾನ್ ಮನೆಯ ಎದುರು ಮಸ್ಟೆರಿಯಲ್ಲಿರುವ 500 ಜನ ನಿರಾಶ್ರಿತರು ತಮ್ಮನ್ನು ದಾಳಿಕೋರರಿಂದ ಕಾಪಾಡುವಂತೆ ಒತ್ತಾಯಿಸಿ ಪ್ರತಿಭಟಿಸಿದ್ದು, ಸಂಘರ್ಷಕ್ಕೆ ಇವರಿಂದ ನಡೆದ ಪ್ರತಿಭಟನೆಯೇ ಕಾರಣ ಎಂದು ಮೂಲಗಳು ಹೇಳಿವೆ.