ವಾಷಿಂಗ್ಟನ್, ಜು 19 (DaijiworldNews/PY): ಡೆಮೋಕ್ರಾಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾದರೆ, ವಿಶ್ವಸಂಸ್ಥೆಯಂತಹ ಅಂತರಾಷ್ಟ್ರೀಯ ಸಂಸ್ಥೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಇದರಿಂದಾಗಿ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನಪಡೆಯಲು ಸಹಾಯವಾಗುತ್ತದೆ ಎಂದು ಅಮೆರಿಕದ ರಾಯಭಾರಿಯಾಗಿದ್ದ ರಿಚರ್ಡ್ ವರ್ಮಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಯಭಾರಿ ವರ್ಮಾ ಅವರು, ಬಿಡೆನ್ ಅವರು ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ನೆರವಾಗಲಿದ್ಧಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಅವರು ನಮ್ಮ ನಾಗರಿಕರನ್ನು ಕಾಪಾಡುವ ನಿಟ್ಟಿನಲ್ಲಿ ಭಾರತದೊಂದಿಗೆ ಕೈಜೋಡಿಸುವ ಕಾರ್ಯ ಮಾಡಲಿದ್ದಾರೆ. ಗಡಿಗೆ ಸಂಬಂಧಪಟ್ಟ ಕಾರ್ಯಗಳನ್ನು ಭಾರತಕ್ಕೆ ನೆರವಾಗುವರು ಎಂದು ತಿಳಿಸಿದ್ದಾರೆ.
ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಹಲವು ವರ್ಷಗಳಿಂದ ಭಾರತವು ವಾದ ಮಾಡುತ್ತಿದೆ.
ಪ್ರಸ್ತುತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 15 ಸದಸ್ಯರಾಷ್ಟ್ರಗಳಿವೆ. ಈ ಪೈಕಿ ಚೀನಾ, ಅಮೆರಿಕ, ಬ್ರಿಟನ್, ಫ್ರಾನ್ಸ್ ಹಾಗೂ ರಷ್ಯಾ ಶಾಶ್ವತ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಾಗಿವೆ. ಈ ನಡುವೆ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಶಾಶ್ವತ ಸದಸ್ಯತ್ವ ನೀಡಲು ಬೆಂಬಲ ನೀಡಿದ್ದರೂ ಕೂಡಾ ಚೀನಾ ಮಾತ್ರ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದೆ.
2014ರಿಂದ 2017ರ ಸಮಯದಲ್ಲಿ ವರ್ಮಾ ಅವರು ಭಾರತದಲ್ಲಿ ಅಮೆರಿಕದ ರಾಯಭಾರಿಯಾಗಿದ್ದರು.