ಸಾನ್ ಫ್ರಾನ್ಸಿಸ್ಕೊ, ಜು 18 (DaijiworldNews/PY): ಕೊರೊನಾವನ್ನು ನಿಭಾಯಿಸಿದ ರೀತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೂಷಿಸಿದ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್, ಅನೇಕ ಅಭಿವೃದ್ದಿಶೀಲ ದೇಶಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ಬಗ್ಗೆ ಅಮೆರಿಕ ಪ್ರತಿಕ್ರಿಯೆ ಕಡಿಮೆ ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.
ಗುರುವಾರ ಶ್ವೇತಭವನದ ಕೊರೊನಾ ವೈರಸ್ ಸಲಹೆಗಾರ ಡಾ ಆಂಥೊನಿ ಫೌಸಿ ಜೊತೆಗೆ ನಡೆಸಿದ ಸಂದರ್ಶನ ವೇಳೆ ಮಾತನಾಡಿದ ಜುಕರ್ ಬರ್ಗ್ ಅವರು, ವಿಶ್ವದ ಪ್ರತಿಯೊಂದು ಅಭಿವೃದ್ದಿಶೀಲ ದೇಶಗಳಿಗೆ ಹೋಲಿಕೆ ಮಾಡಿದರೆ ಕೊರೊನಾ ನಿರ್ವಹಣೆಯನ್ನು ಅಮೆರಿಕ ಕಡಿಮೆ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಪ್ರತಿದಿನ ದಾಖಲೆಯ ಹೊಸ ಪ್ರಕರಣಗಳನ್ನು ಎದುರಿಸುತ್ತಿದ್ದೇವೆ ಎಂದಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಮೆರಿಕದಲ್ಲಿ ಪ್ರತಿದಿನ 50,000 ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಇದನ್ನು ನಿಭಾಯಿಸುವಲ್ಲಿ ಅಮೆರಿಕ ಸರ್ಕಾರ ಕೊರೊನಾ ವಿರುದ್ದ ಹೋರಾಡುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಕೊರೊನಾ ನಿಯಂತ್ರಿಸಲು ಇನ್ನೂ ಸಮಪರ್ಕವಾದ ಪರೀಕ್ಷೆ ನಡೆಯುತ್ತಿಲ್ಲ ಇದು ನಿಜಕ್ಕೂ ನಿರಾಶಾದಾಯಕವಾಗಿದೆ. ಹಾಗಾಗಿ ಮಾಸ್ಕ್ ಧರಿಸುವಂತ ಮೂಲಭೂತ ಉತ್ತಮ ಅಭ್ಯಾಸಗಳನ್ನು ಅನುಸರಿಸಬೇಕೆ ಎಂದು ಕೇಳಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವು ಅಮೆರಿಕಕ್ಕೆ ಕಠಿಣವಾಗಿದೆ. ಏಕೆಂದರೆ, ಅಮೆರಿಕದಲ್ಲಿ ಈವರೆಗೆ 35 ಕ್ಕೂ ಅಧಿಕ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 138 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.