ಲೋವಾ, ಜು.18 (DaijiworldNews/MB) : ಪಶ್ಚಿಮ ಚೀನಾದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಸಾಮೂಹಿಕ ಗರ್ಭಪಾತ ಹಾಗೂ ಸಂತಾನಹರಣಕ್ಕೆ ಚೀನಾ ಸರ್ಕಾರ ಒತ್ತಡ ಹೇರುತ್ತಿದೆ ಎಂಬ ವರದಿಗಳನ್ನು ಓದಿದ್ದು ಮಾನವ ಹಕ್ಕುಗಳ ಬಹುದೊಡ್ಡ ಉಲ್ಲಂಘನೆ ಇದಾಗಿದೆ ಎಂದು ಅಮೆರಿಕ ಸರ್ಕಾರದ ಕಾರ್ಯದರ್ಶಿ ಮೈಕ್ ಪಾಂಪಿಯೊ ಹೇಳಿದ್ದಾರೆ.
ಶುಕ್ರವಾರ ಲೋವಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಚೀನಾದ ಕಮ್ಯುನಿಸ್ಟ್ ಪಕ್ಷವು ಹಾಂಗ್ಕಾಂಗ್ನ ಸ್ವಾತಂತ್ಯ್ರವನ್ನು ಕಸಿಯುವುದು ಮಾತ್ರವಲ್ಲದೇ ಸ್ವತಂತ್ರ ತೈವಾನ್ಗೂ ಬೆದರಿಕೆಯೊಡ್ಡುತ್ತಿದೆ. ಜಾಗತಿಕವಾಗಿ ಸಂವಹನ ಜಾಲಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಪಶ್ಚಿಮ ಚೀನಾದಲ್ಲಿ ಮುಸ್ಲಿಮ್ ಮಹಿಳೆಯರಿಗೆ ಸಾಮೂಹಿಕ ಗರ್ಭಪಾತ ನಡೆಸಲು ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ.
ಅಮೆರಿಕವು ಜಾಗತಿಕವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ತೊಡಗಿರುವವರಿಗೆ ಮಾಹಿತಿ ನೀಡುತ್ತಿದ್ದ ಹವಾಯಿ ಸೇರಿದಂತೆ ಚೀನಾದ ಹಲವು ತಂತ್ರಜ್ಞಾನ ಕಂಪನಿಗಳ ಉದ್ಯೋಗಿಗಳಿಗೆ ನಿರ್ಬಂಧ ಹೇರಿ ವೀಸಾವನ್ನು ಕೂಡಾ ರದ್ದು ಮಾಡಿದೆ. ಹಾಗೆಯೇ ಮಾದಕವಸ್ತು ನಿಯಂತ್ರಣಾ ಕಾಯ್ದೆ ಅಡಿಯಲ್ಲಿ ಐವರು ಚೀನೀ ಪ್ರಜೆಗಳನ್ನು ಬಂಧಿಸಿ ಎರಡು ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿದೆ.