ಅಮೇರಿಕಾ, ಜು 17 (Daijiworld News/MSP): ವಿಶ್ವದಲ್ಲೇ ಅಮೇರಿಕಾ ದೇಶದ ನಂತರ ಭಾರತವು ಅತಿ ಹೆಚ್ಚು ಕೊರೊನಾ ವೈರಸ್ ಪರೀಕ್ಷೆಗಳನ್ನು ಮಾಡಿದ ಎರಡನೇ ದೇಶವಾಗಿದೆ ಎಂದು ಶ್ವೇತಭವನ ಗುರುವಾರ ಹೇಳಿದೆ.
ಅಮೆರಿಕದಲ್ಲಿ ಇದುವರೆಗೆ 42 ದಶಲಕ್ಷ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದ್ದರೆ, ಭಾರತದಲ್ಲಿ 12 ದಶಲಕ್ಷ ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದೆ. ಹೀಗಾಗಿ ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಿನ ಪರೀಕ್ಷೆ ನಾವು ನಡೆಸಿದ್ದರೆ, ನಮ್ಮ ನಂತರದ ಸ್ಥಾನದಲ್ಲಿ ಭಾರತ ನಿಂತಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೈಲೀಗ್ ಮೆಕ್ಎನ್ಯಾನಿ ಮಾಹಿತಿ ನೀಡಿದ್ದಾರೆ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ, ಜುಲೈ 16 ರವರೆಗೆ ಭಾರತ 1.30 ಕೋಟಿ ಮಾದರಿಗಳನ್ನು ಪರೀಕ್ಷಿಸಿದೆ. ಈ ಪೈಕಿ 3.33 ಲಕ್ಷ ಮಾದರಿಗಳನ್ನು ಗುರುವಾರ ಒಂದೇ ದಿನ ಪರೀಕ್ಷಿಸಲಾಗಿದೆ.
ಅಮೇರಿಕಾದಲ್ಲಿ , 30 ಲಕ್ಷಕ್ಕೂ ಹೆಚ್ಚು ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. ಇವರ ಪೈಕಿ 1,38,000 ಜನರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, ಭಾರತದಲ್ಲಿ ಸೋಂಕಿತರ ಸಂಖ್ಯೆ ಶುಕ್ರವಾರ 10 ಲಕ್ಷ ದಾಟಿದ್ದು ಈ ಪೈಕಿ 25 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವೈರಸ್ನಿಂದ ಹೆಚ್ಚು ಹಾನಿಗೊಳಗಾದ ದೇಶ ಅಮೇರಿಕಾ. ಜಾಗತಿಕವಾಗಿ ಭಾರತವು ಮೂರನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ಜಾಗತಿಕವಾಗಿ ಒಟ್ಟು 13.6 ದಶಲಕ್ಷ ಜನರಿಗೆ ಸೋಂಕು ತಗುಲಿದ್ದು, 5.86 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಇದೇ ವೇಳೆ ಮಾಧ್ಯಮ ಕಾರ್ಯದರ್ಶಿ, ಕೊರೊನಾ ವಿರುದ್ದದ ಹೋರಾಟದಲ್ಲಿ ಲಸಿಕೆಗಳ ಬಗ್ಗೆ ಧನಾತ್ಮಕವಾದ ಸುದ್ದಿಗಳಿವೆ ಮಾಡರ್ನಾದ ಲಸಿಕೆ ಹೊಸ ಭರವಸೆಯನ್ನು ಹುಟ್ಟುಹಾಕುತ್ತಿದೆ ಎಂದಿದ್ದಾರೆ.