ವಾಷಿಂಗ್ಟನ್, ಜು 16 (Daijiworld News/MSP): ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ, ಜೋ ಬಿಡೆನ್, ಟೆಸ್ಲಾ ಕಂಪನಿಯ ಸಿಇಒ ಎಲೋನ್ ಮಸ್ಕ್, ಬಿಲ್ ಗೇಟ್ಸ್ ಸೇರಿದಂತೆ ಹಲವು ರಾಜಕಾರಣಿಗಳು , ಸೆಲೆಬ್ರಿಟಿಗಳು, ಮತ್ತು ಪ್ರಮುಖ ಕಂಪನಿಗಳ ಟ್ವೀಟರ್ ಅನಾಮಧೇಯ ಅಕೌಂಟ್ ಗಳನ್ನು ಬಿಟ್ ಕಾಯಿನ್ ದಂಧೆಕೋರರು ಬುಧವಾರ ಹ್ಯಾಕ್ ಮಾಡಿದ್ದಾರೆ.
ಕ್ರಿಪ್ಟೋಕರೆನ್ಸಿ ಯನ್ನು ಉತ್ತೇಜಿಸುವ ಸಂದೇಶಗಳನ್ನು ಹ್ಯಾಕ್ ಮಾಡಿದ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. 1 ಸಾವಿರ ಡಾಲರ್ ನೀಡಿದರೆ, 2 ಸಾವಿರ ಡಾಲರ್ ನೀಡುತ್ತೇವೆ. ಹೀಗಾಗಿ ನನ್ನ ಬಿಟ್ ಕಾಯಿನ್ ಅಡ್ರೆಸ್ಸ್ ಗೆ ಹಣ ಜಮೆ ಮಾಡಿ. ನಿಮಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು ತಕ್ಷಣ ಹಣ ಕಳಿಸಿ ಎಂಜಾಯ್ ಮಾಡಿ ಎಂದು ಟ್ವೀಟ್ ಮಾಡಲಾಗಿದೆ.
ಬರಾಕ್ ಒಬಾಮ, ಜೋ ಬಿಡನ್, ಜೆಫ್ ಬೆಜೋಸ್, ವಾರೆನ್ ಬಫೆಟ್, ಬಿಲ್ ಗೇಟ್ಸ್, ಮೈಕ್ ಬ್ಲೂಮ್ಬರ್ಗ್, ಎಲೋನ್ ಮಸ್ಕ್, ಕಾನ್ಯೆ ವೆಸ್ಟ್ ಮತ್ತು ಇತರರ ಖಾತೆಗಳ ಹ್ಯಾಕ್ ಆಗಿವೆ. ಅಲ್ಲದೆ ಪ್ರಮುಖ ಕಾರ್ಪೊರೇಟ್ ಸಂಸ್ಥೆಗಲಾದ ಉಬರ್ ಮತ್ತು ಆಪಲ್ ಖಾತೆಗಳ ಮೇಲೂ ಪರಿಣಾಮ ಬೀರಿದೆ.
ಖ್ಯಾತನಾಮರ ಟ್ವೀಟರ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ಟ್ವೀಟರ್ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಟ್ವೀಟರ್ ಅಕೌಂಟ್ ಗಳ ಮೇಲೆ ಪರಿಣಾಮ ಬೀರುತ್ತಿರುವ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ನಮಗೆ ಗೊತ್ತಾಗಿದೆ. ಅದನ್ನು ನಾವು ಪತ್ತೆಹಚ್ಚುತ್ತಿದ್ದೇವೆ ಎಂದು ಹೇಳಿದೆ.
'ಇದು ಮೋಸದ ಜಾಲ. ಯಾರೂ ಇದರಲ್ಲಿ ಭಾಗವಹಿಸಬೇಡಿ,' ಎಂದು ಜೆಮಿನಿ ಕ್ರಿಪ್ಟೋಕರೆನ್ಸಿ (ಬಿಟ್ಕಾಯಿನ್) ಎಕ್ಸ್ಚೇಂಜ್ನ ಸಹ-ಸಂಸ್ಥಾಪಕ ಕ್ಯಾಮರೂನ್ ವಿಂಕ್ಲೆವೊಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ ಎಲ್ಲರನ್ನೂ ಎಚ್ಚರಿಸಿದ್ದಾರೆ.