ಜಿನೇವಾ, ಜು 11 (DaijiworldNews/PY): ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಅನ್ನು ನಿಯಂತ್ರಣಕ್ಕೆ ತರಬಹುದು. ವಿಶ್ವದಾದ್ಯಂತ ಅನೇಕ ಉದಾಹರಣೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದೊನಮ್ ಗೆಬ್ರೆಯೆಸಸ್ ಶುಕ್ರವಾರ ಹೇಳಿದ್ದಾರೆ.
ಟೆಡ್ರೊಸ್ ಜಿನಿವಾದಲ್ಲಿ ವರ್ಚುವಲ್ ಕಾನ್ಫರೆನ್ಸ್ ಮಾತನಾಡಿದ ಅವರು, ಇಟಲಿ, ಸ್ಪೇನ್, ದಕ್ಷಿಣ ಕೊರಿಯಾ ಮತ್ತು ಭಾರತದ ಅತಿದೊಡ್ಡ ಕೊಳೆಗೇರಿಗಳ ಉದಾಹರಣೆ ನೀಡಿದ ಅವರು, ವೇಗವಾಗಿ ಹರಡುತ್ತಿರುವ ಕೊರೊನಾ ವೈರಸ್ ಅನ್ನು ಕಠಿಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಯಂತ್ರಣ ಮಾಡಬಹುದು ಎಂದು ತಿಳಿಸಿದ್ದಾರೆ.
ಕಳೆದ ಆರು ವಾರಗಳಲ್ಲಿ ಪ್ರಕರಣಗಳು ದ್ವಿಗುಣಗೊಂಡಿದೆ. ಅದಾಗಿಯೂ, ಏಕಾಏಕಿ ಕೊರೊನಾ ವೈರಸ್ ಹೆಚ್ಚಾಗುತ್ತಿದ್ದರೂ ಸಹ ಅದನ್ನು ಮತ್ತೆ ನಿಯಂತ್ರಣಕ್ಕೆ ತರಬಹುದು. ವಿಶ್ವದಾದ್ಯಂತದ ಅನೇಕ ಉದಾಹರಣೆಗಳಿವೆ ಎಂದು ಟೆಡ್ರೊಸ್ ಹೇಳಿದರು.
ಎಎಫ್ಪಿ ಶುಕ್ರವಾರ ಸಂಗ್ರಹಿಸಿದ ಅಧಿಕೃತ ಮೂಲಗಳ ಮಾಹಿತಿಯ ಪ್ರಕಾರ, ಚೀನಾದಲ್ಲಿ ಕಳೆದ ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ನಿಂದ ವಿಶ್ವದಾದ್ಯಂತ 555,000 ಜನರು ಸಾವನ್ನಪ್ಪಿದ್ದಾರೆ. 196 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಸುಮಾರು 12.3 ಮಿಲಿಯನ್ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.
ಕೊರೊನಾ ಪರೀಕ್ಷೆ, ಸೋಂಕಿತರನ್ನು ಪತ್ತೆ ಮಾಡುವುದು, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವುದು, ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡುವುದು ಇವೆಲ್ಲದರಿಂದ ಕೊರೊನಾ ಸೋಂಕು ವ್ಯಾಪಿಸುವುದನ್ನು ನಿಯಂತ್ರಣ ಮಾಡಬಹುದು ಎಂದರು.