ಅಮೇರಿಕಾ, ಜು 06 (Daijiworld News/MSP): ಹಾರಾಟ ನಡೆಸುತ್ತಿರುವಾಗ ಆಕಾಶ ಮಾರ್ಗದಲ್ಲಿ ಎರಡು ವಿಮಾನಗಳು ಪರಸ್ಪರ ಒಂದಕ್ಕೊಂದು ಢಿಕ್ಕಿಯಾಗಿ ಅಪಘಾತ ಸಂಭವಿಸಿ ಸರೋವರಕ್ಕೆ ಬಿದ್ದು 8 ಜನ ಸಾವಿಗೀಡಾದ ಘಟನೆ ಅಮೇರಿಕಾ ದೇಶದ ಇದಾಹೊ ರಾಜ್ಯದಲ್ಲಿ ನಡೆದಿದೆ.
ಘಟನೆಯ ಬಗ್ಗೆ ಕೂಟೆನೈ ಕೌಂಟಿ ಶೆರಿಫ್ ಕಚೇರಿಯ ಲೆಫ್ಟಿನೆಂಟ್ ರಯಾನ್ ಹಿಗ್ಗಿನ್ಸ್ ಹೇಳಿಕೆ ನೀಡಿದ್ದು, " ಎರಡು ವಿಮಾನಗಳು ಒಂದಕ್ಕೊಂದು ಅಪ್ಪಳಿಸಿ ನಂತರ ಪೌಡರ್ಹಾರ್ನ್ ಕೊಲ್ಲಿಯ ಬಳಿಯ ಲೇಕ್ ಕೋಯರ್ ಡಿ ಅಲೀನ್ ಗೆ ಅಪ್ಪಳಿಸಿತು, ಎರಡೂ ವಿಮಾನಗಳನ್ನು ಶೆರಿಫ್ ಕಚೇರಿಯ ಸೋನಾರ್ ತಂಡವು ಪತ್ತೆ ಮಾಡಿದೆ. ಸುಮಾರು 127 ಅಡಿ ನೀರಿನಲ್ಲಿ ವಿಮಾನಗಳು ಪತ್ತೆಯಾಗಿದೆ. ಘಟನೆಯಲ್ಲಿ ಯಾರೊಬ್ಬರು ಬದುಕುಳಿದಿಲ್ಲ . ಅಪಘಾತದ ಸ್ವಲ್ಪ ಸಮಯದ ನಂತರ ಸರೋವರದಲ್ಲಿ "ಕೆಟ್ಟ ತೈಲ ತೇಲುತ್ತಿತ್ತು " ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.
ಈ ಎರಡು ಲಘು ವಿಮಾನಗಳಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು. ಈಗಾಗಲೇ ಕಾರ್ಯಾಚರಣೆ ಆರಂಭವಾಗಿದ್ದು ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಎರಡು ವರ್ಷದ ಮಗು ಸೇರಿ ಇನ್ನೂ ಆರು ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಘಟನೆಯಲ್ಲಿ ಅವರೆಲ್ಲಾ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಎಂದು ಸ್ಥಳೀಯ ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.