ನ್ಯೂಯಾರ್ಕ್, ಜು. 02 (DaijiworldNews/MB) : ಅಮೆರಿಕದ ಸ್ವಾತಂತ್ರ್ಯದ ದಿನದ ಅಂಗವಾಗಿ ಅಮೆರಿಕ ಫೌಂಡೇಷನ್ ನೀಡುವ ಪ್ರತಿಷ್ಠಿತ ''ಸಾಧಕ ವಲಸಿಗರು'' ಪ್ರಶಸ್ತಿ ಈ ವರ್ಷ ಇಬ್ಬರು ಭಾರತೀಯರ ಮುಡಿಗೇರಿದೆ.
ಕೊರೊನಾ ಸಂದರ್ಭದಲ್ಲಿ ಭಾರತೀಯ ಮೂಲದ ಜೀವಶಾಸ್ತ್ರಜ್ಞ ಸಿದ್ಧಾರ್ಥ ಮುಖರ್ಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಜ್ ಶೆಟ್ಟಿ ಅವರನ್ನು ನ್ಯೂಯಾರ್ಕ್ನ ಕಾರ್ನೀಜ್ ಕಾರ್ಪೊರೇಷನ್ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಒಟ್ಟು 38 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇನ್ನು ಸಿದ್ಧಾರ್ಥ ಮುಖರ್ಜಿ ಅವರು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತರು ಕೂಡಾ ಆಗಿದ್ದು ಭಾರತ ಸರ್ಕಾರ 2014ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿದೆ. ನವದೆಹಲಿಯಲ್ಲಿ ಜನಿಸಿದ ಅವರು ಕೊಲಂಬಿಯಾ ವಿ.ವಿಯ ಬೋಧಕ ಸಿಬ್ಬಂದಿ ಆಗಿದ್ದಾರೆ. ಹಾಗೆಯೇ ನ್ಯೂಯಾರ್ಕ್ ರಾಜ್ಯಪಾಲರು ರಚಿಸಿರುವ 15 ಸದಸ್ಯರ ಬ್ಲೂ ರಿಬ್ಬನ್ ಕಮಿಷನ್ ಸದಸ್ಯರಾಗಿದ್ದಾರೆ.
ಇನ್ನು ಪ್ರೊ. ರಾಜ್ ಶೆಟ್ಟಿ ಅವರೂ ಆಪರ್ಚುನಿಟಿ ಇನ್ಸೈಟ್ಸ್ ಎಂಬ ಸಂಶೋಧನಾ ಪ್ರಯೋಗಾಲಯವನ್ನು ನಡೆಸುತ್ತಿದ್ದು ಅವರು ಕೂಡಾ ದೆಹಲಿಯಲ್ಲಿ ಜನಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಈ ಪ್ರಶಸ್ತಿ ಪಡೆದ ಅತಿ ಕಿರಿಯ ಪ್ರಾಧ್ಯಾಪಕರು ಇವರಾಗಿದ್ದಾರೆ.
ಈ ಇಬ್ಬರು ಕೂಡಾ ಕೊರೊನಾ ಕುರಿತಾದ ಅಧ್ಯಯನಕ್ಕೆ ಅಗತ್ಯ ಮಾಹಿತಿಗಳನ್ನು ಒದಗಿಸಿದ್ದು ಈ ನಿಟ್ಟಿನಲ್ಲಿ ಇವರ ಸಾಧನೆಯನ್ನು ಗುರುತಿಸಿ ಸಾಧಕ ವಲಸಿಗರು ಪ್ರಶಸ್ತಿಯಿಂದ ಗೌರವಿಸಲಾಗುತ್ತಿದೆ.