ವೆಲ್ಲಿಂಗ್ಟನ್, ಜು 02(DaijiworldNews/PY): ನ್ಯೂಜಿಲೆಂಡ್ನ ಕೊರೊನಾ ನಿಯಂತ್ರಣಾ ಕ್ರಮಗಳಿಗಾಗಿ ಪ್ರಶಂಸೆಗೆ ಪಾತ್ರರಾಗಿರುವ ನ್ಯೂಜಿಲೆಂಡ್ನ ಆರೋಗ್ಯ ಸಚಿವ ಡೇವಿಡ್ ಕ್ಲಾರ್ಕ್ ಗುರುವಾರ ರಾಜೀನಾಮೆ ನೀಡಿದ್ದಾರೆ.
ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಕ್ಲಾರ್ಕ್ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡುವುದಾಗಿ ಗುರುವಾರ ತಿಳಿಸಿದ್ದಾರೆ.
ಕೊರೊನಾ ವೈರಸ್ ಅನ್ನು ನಿಯಂತ್ರಣ ಮಾಡಲು ದೇಶವು ಯಶಸ್ವಿಯಾದ ನಂತರ ನ್ಯೂಜಿಲೆಂಡ್ನ ಆರೋಗ್ಯ ಸಚಿವರ ಪ್ರತಿಕ್ರಿಯೆಯನ್ನು ವಿಶ್ವದಾದ್ಯಂತ ಪ್ರಶಂಸಿಸಲಾಗಿದೆ. ಆದರೆ ಕ್ಲಾರ್ಕ್ ಅವರನ್ನೇ ವ್ಯಾಪಕವಾಗಿ ಅಪಹಾಸ್ಯ ಮಾಡಲಾಗಿದೆ. ಈ ನಡುವೆ ಲಾಕ್ಡೌನ್ ನಿಯಮವನ್ನು ಉಲ್ಲಂಘನೆ ಮಾಡಿ, ನಿಯಮಗಳಲ್ಲಿ ಎಸಗಿದ ಪ್ರಮಾದಗಳ ಕಾರಣ ಕ್ಲಾರ್ಕ್ ಅವರು ರಾಜೀನಾಮೆ ನೀಡಿದ್ದಾರೆ.
ಕ್ಲಾರ್ಕ್ ಅವರು ರಾಷ್ಟ್ರದ ಲಾಕ್ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡಿ ತಮ್ಮ ಕುಟುಂಬದೊಂದಿಗೆ ಸಮುದ್ರ ತೀರಕ್ಕೆ ಕರೆದೊಯ್ದಿದ್ದರು. ಲಾಕ್ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿರುವ ತಮ್ಮ ನಡೆಗೆ ಬೇಸರಗೊಂಡಿದ್ದ ಕ್ಲಾರ್ಕ್ ತಮ್ಮನ್ನು ತಾವೇ ಮೂರ್ಖ ಎಂದಿದ್ದರು.
ನ್ಯೂಜಿಲೆಂಡ್ ಆರೋಗ್ಯ ಅಧಿಕಾರಿಗಳು ಲಾಕ್ಡೌನ್ ನಿಯಮವನ್ನು ಲೆಕ್ಕಿಸದೇ, ತಮ್ಮ ಪೋಷಕರನ್ನು ನೋಡಲು ಇಬ್ಬರು ನಾಗರಿಕರಿಗೆ ಅವಕಾಶ ನೀಡಿದ್ದು, ಬಳಿಕ ಇಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ವಿಚಾರ ದೇಶಾದ್ಯಂತ ಟೀಕೆಗೆ ಗ್ರಾಸವಾಗಿತ್ತು.
ಇಲ್ಲಿಯವರೆಗೆ ನನ್ನ ಕೆಲಸವನ್ನು ನಾನು ಸೂಕ್ತವಾಗಿ ನಿರ್ವಹಿಸಿದ್ದೇನೆ. ನಾನು ಇನ್ನು ಮುಂದೆ ಸಂಸತ್ನ ಸದಸ್ಯನಾಗಿ ಮುಂದುವರಿಯಲಿದ್ದೇನೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ನಲ್ಲಿ ಒಟ್ಟು 1,530 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಸುಮಾರು 22 ಜನ ಸಾವನ್ನಪ್ಪಿದ್ದಾರೆ.