ಥೈಲ್ಯಾಂಡ್, ನ.16 (DaijiworldNews/AK):ಥೈಲ್ಯಾಂಡ್ನ ಜನಪ್ರಿಯ ಪ್ರವಾಸಿ ತಾಣವಾದ ಫುಕೆಟ್ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಪಟೋಂಗ್ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ.

ಫುಕೆಟ್ನ ಪಶ್ಚಿಮ ಕರಾವಳಿಯಲ್ಲಿರುವ ಪ್ರಸಿದ್ಧ ಪಟೋಂಗ್ ಬೀಚ್ ಸಮೀಪ ಈ ಘಟನೆ ನಡೆದಿದೆ. ಸೋಮವಾರ ಬೆಳಗಿನ ಜಾವ ಸುಮಾರು 3.17ರ ವೇಳೆಗೆ ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಒಂದು ಕಟ್ಟಡಕ್ಕೆ ಸೀಮಿತವಾಗಿದ್ದ ಬೆಂಕಿ, ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದೆ.
ಬೆಂಕಿ ಆವರಿಸಿದಾಗ ಕಟ್ಟಡದ ಮೇಲಿನ ಮಹಡಿಗಳಲ್ಲಿ ಹಲವರು ಇದ್ದರು. ದಟ್ಟವಾದ ಹೊಗೆ ಕಟ್ಟಡವನ್ನೆಲ್ಲ ಆವರಿಸಿದ್ದರಿಂದ ಅಲ್ಲಿದ್ದವರಿಗೆ ಹೊರಬರಲು ತೊಂದರೆಯಾಗಿದೆ. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸುಮಾರು ಎರಡು ಗಂಟೆಗಳ ಸತತ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಬಳಿಕ ಕಟ್ಟಡದಲ್ಲಿ ಪರಿಶೀಲನೆ ನಡೆಸಿದಾಗ 11 ಜನರು ಮೃತಪಟ್ಟಿರುವುದು ಪತ್ತೆಯಾಗಿದೆ. ಇನ್ನು 16 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಗೆ ಸೇವನೆ ಮತ್ತು ಒಡೆದ ಗಾಜಿನಿಂದ ಉಂಟಾದ ಗಾಯಗಳಿಂದ ಕೆಲವರು ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ 15 ಮಂದಿ ಥಾಯ್ಲೆಂಡ್ನ ಪ್ರಜೆಗಳಾಗಿದ್ದು, ಒಬ್ಬರು ಮ್ಯಾನ್ಮಾರ್ ದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರವಾಸಿಗರು ಮೃತಪಟ್ಟಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ.