ಲಂಡನ್, ನ.15 (DaijiworldNews/AK): 70ಕ್ಕೂ ಹೆಚ್ಚು ಅಪ್ರಾಪ್ತ ಬಾಲಕಿಯರಿಗೆ ಆನ್ಲೈನ್ನಲ್ಲಿ ಮೋಡಿ ಮಾಡಿ, ನಂಬಿಸಿ, ಅವರ ಖಾಸಗಿ ಹಾಗೂ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಬ್ಲ್ಯಾಕ್ಮೇಲ್ ಮಾಡಿದ ಗಂಭೀರ ಅಪರಾಧಕ್ಕಾಗಿ ಬ್ರಿಟನ್ನಲ್ಲಿದ್ದ ಭಾರತೀಯ ಪ್ರಜೆ ಬಿಲಾಲ್ ಕಾಜಿ ಎಂಬಾತನಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಪ್ರಾಪ್ತ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಆನ್ಲೈನ್ ಶೋಷಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಬ್ರಿಟನ್ ನ್ಯಾಯಾಲಯವು, ಅಪರಾಧಿಗೆ 30 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ. ಅಲ್ಲದೆ, ಆತನ ಹೆಸರನ್ನು ಶಾಶ್ವತವಾಗಿ ಲೈಂಗಿಕ ಅಪರಾಧಿಗಳ ಪಟ್ಟಿಯಲ್ಲಿ ಸೇರಿಸಲು ಆದೇಶಿಸಿದೆ.
ಮೂಲತಃ ಮುಂಬೈನವನಾದ 27 ವರ್ಷದ ಬಿಲಾಲ್ ಕಾಜಿ, ಬ್ರಿಟನ್ನ ಚೆಸ್ಟರ್ನಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದು, ಬಳಿಕ ಬರ್ಮಿಂಗ್ಹ್ಯಾಮ್ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಯಾಗಿ ಅಲ್ಲಿ ರಸಾಯನಶಾಸ್ತ್ರ ಅಧ್ಯಯನ ಮಾಡುತ್ತಿದ್ದನು. 2021ರ ಆಗಸ್ಟ್ನಿಂದ 2025ರ ಆಗಸ್ಟ್ ಅವಧಿಯಲ್ಲಿ ಬ್ರಿಟನ್ನಾದ್ಯಂತ 70ಕ್ಕೂ ಹೆಚ್ಚು ಬಾಲಕಿಯರನ್ನು ಕಾಜಿ ಆನ್ಲೈನ್ನಲ್ಲಿ ಶೋಷಿಸಿದ್ದಾನೆ. ಸ್ನ್ಯಾಪ್ಚಾಟ್, ರೋಬ್ಲಾಕ್ಸ್, ವಿಂಕ್ ಮತ್ತು ವಿಜ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಅಪ್ರಾಪ್ತ ಬಾಲಕನ ಫೋಟೋಗಳನ್ನು ಬಳಸಿಕೊಂಡು, ತಾನು ‘ರೀಸ್’ ಎಂಬ ಬ್ರಿಟಿಷ್ ಹುಡುಗನೆಂದು ನಂಬಿಸಿದ್ದ.
10ರಿಂದ 17 ವರ್ಷದೊಳಗಿನ ಬಾಲಕಿಯರೊಂದಿಗೆ ಪ್ರೇಮ ಸಂಬಂಧ ಬೆಳೆಸುತ್ತಿದ್ದ ಕಾಜಿ, ಅವರ ವಿಶ್ವಾಸ ಗಳಿಸಿದ ನಂತರ ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಪ್ರೇರೇಪಿಸುತ್ತಿದ್ದನು. ಬಾಲಕಿಯರು ನಿರಾಕರಿಸಿದರೆ ಅಥವಾ ಹಿಂಜರಿದರೆ, ಅವರ ಖಾಸಗಿ ಫೋಟೋಗಳನ್ನು ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕೆಲವು ಪ್ರಕರಣಗಳಲ್ಲಿ ಸಂತ್ರಸ್ತೆಯರ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿ, ನೇರವಾಗಿ ಅವರ ಸ್ನೇಹಿತರಿಗೇ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಿದ್ದನು. 2021ರ ನವೆಂಬರ್ನಲ್ಲಿ ಸಂತ್ರಸ್ತ ಬಾಲಕಿಯೊಬ್ಬಳು ಡರ್ಬಿಶೈರ್ ಪೊಲೀಸರಿಗೆ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತು.