ಅಮೆರಿಕಾ, ನ.14 (DaijiworldNews/TA): ಅಮೆರಿಕಾದಲ್ಲಿ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ವೈಫಲ್ಯದಿಂದ ವಿಮಾನಯಾನ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಂದೇ ಬಾರಿಗೆ ಸಾವಿರಾರು ವಿಮಾನಗಳ ಹಾರಾಟಕ್ಕೆ ತಡೆ ಉಂಟಾಗಿದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ.

ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ದೇಶದ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಇದರಿಂದ 4,700ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, 10 ಸಾವಿರಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ. ಸುಮಾರು 15 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಸಂವಹನ ವ್ಯವಸ್ಥೆ ಫೇಲ್ ಆಗಿದ್ದೇಕೆ? : ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ನೀಡಿರುವ ಮಾಹಿತಿಯ ಪ್ರಕಾರ, ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸ್ವಿಚ್ಗಳು ಮತ್ತು ರೂಟರ್ಗಳು ಅತಿಯಾದ ಡೇಟಾ ಒತ್ತಡದಿಂದ ಓವರ್ಲೋಡ್ ಆಗಿದ್ದವು. ಇದರಿಂದ ತಪ್ಪಾದ ಹಾಗೂ ಅಸಮಂಜಸ ಮಾಹಿತಿಗಳು ರವಾನೆಯಾಗಿ ಸಂವಹನ ಮತ್ತು ರಾಡಾರ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿತ್ತು. ಪೈಲಟ್ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್ಗಳ ನಡುವಿನ ಸಂವಹನದಲ್ಲಿ ವ್ಯತ್ಯಯ ಉಂಟಾದರೆ ವಿಮಾನಗಳ ಸುರಕ್ಷತೆಗೆ ಅಪಾಯ ಎದುರಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ FAA ಹಾರಾಟಕ್ಕೆ ನಿರ್ಬಂಧ ವಿಧಿಸಿತ್ತು.
ಈ ತಾಂತ್ರಿಕ ವೈಫಲ್ಯದ ಹಿಂದೆ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆಯ ಕೈವಾಡವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ದಾಳಿಯ ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ ಎಂದು ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್ವೇನ್ ಮುಲ್ಲಿನ್ ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಸೇವೆಗಳಲ್ಲಿನ ವ್ಯತ್ಯಯಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇದೀಗ ವಿಮಾನ ಹಾರಾಟಕ್ಕೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದ್ದರೂ, ವಿಮಾನಯಾನ ಸೇವೆಗಳು ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ನಡುವೆ ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸಲು 50 ಬಿಲಿಯನ್ ಡಾಲರ್ ಅನುದಾನದ ಅಗತ್ಯವಿದೆ ಎಂದು ಸಾರಿಗೆ ಕಾರ್ಯದರ್ಶಿ ಒತ್ತಾಯಿಸಿದ್ದಾರೆ. ಅಮೆರಿಕದ ವಿಮಾನಯಾನ ವ್ಯವಸ್ಥೆಯಲ್ಲಿನ ಈ ತಾಂತ್ರಿಕ ವೈಫಲ್ಯ ಜಾಗತಿಕ ವಿಮಾನ ಸಂಚಾರದ ಮೇಲೂ ಪರಿಣಾಮ ಬೀರುವ ಆತಂಕ ಮೂಡಿಸಿದೆ.