ಅಬುಧಾಬಿ, ನ.13 (DaijiworldNews/TA): ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) ಫುಜೈರಾ ಎಮಿರೇಟ್ನಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳೂ ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ. ನಿಯಂತ್ರಣ ತಪ್ಪಿದ ಟ್ರಕ್ವೊಂದು ಬರೋಬ್ಬರಿ 23 ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ದುರಂತ ಸಂಭವಿಸಿದೆ. ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ನಿಧಾನಗತಿಯ ಸಂಚಾರದಿಂದಾಗಿ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ನಿಯಂತ್ರಣ ಕಳೆದುಕೊಂಡ ಟ್ರಕ್ ವೇಗವಾಗಿ ಬಂದು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಟ್ರಕ್ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಪಘಾತದಲ್ಲಿ ಒಟ್ಟು ಐದು ಟ್ರಕ್ಗಳು ಮತ್ತು 18 ಕಾರುಗಳು ಹಾನಿಗೊಳಗಾಗಿವೆ. ಬೆಂಕಿ ಹಾಗೂ ಡಿಕ್ಕಿಯ ಪರಿಣಾಮ 14 ಮಂದಿ ಮೃತಪಟ್ಟಿದ್ದು, 30 ಜನ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯ ಪ್ರಜೆಗಳೂ ಸೇರಿರುವುದು ದೃಢಪಟ್ಟಿದೆ.
ಗಾಯಾಳುಗಳ ಪೈಕಿ 15 ಮಂದಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದ 15 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇನ್ನು ಮೃತರ ಗುರುತು ಪತ್ತೆಹಚ್ಚಲು ಅಧಿಕಾರಿಗಳು ಡಿಎನ್ಎ ಪರೀಕ್ಷೆ ನಡೆಸುತ್ತಿದ್ದಾರೆ. ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮೃತರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯ ನೆರವು ಒದಗಿಸುತ್ತಿದೆ. ವಿದೇಶದಲ್ಲಿ ಸಂಭವಿಸಿದ ಈ ಭೀಕರ ಅಪಘಾತ ಭಾರತೀಯ ಸಮುದಾಯದಲ್ಲೂ ಆತಂಕ ಮೂಡಿಸಿದೆ.