ಮಸ್ಕತ್, ನ.12 (DaijiworldNews/AK): ಉದ್ಯೋಗ, ವ್ಯಾಪಾರ ಹಾಗೂ ವಿವಿಧ ಕಾರಣಗಳಿಂದ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ನೆಲದ ಸಂಸ್ಕೃತಿ, ಭಾಷೆ ಮತ್ತು ಇತಿಹಾಸವನ್ನು ಮರೆತಿಲ್ಲ ಎಂಬುದಕ್ಕೆ ಒಮಾನ್ನಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವೇ ಸಾಕ್ಷಿಯಾಗಿದೆ.

ಒಮಾನ್ ದೇಶದ ರಾಜಧಾನಿ ಮಸ್ಕತ್ನಲ್ಲಿ ಒಮಾನ್ ಒಕ್ಕಲಿಗರ ಬಳಗದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿನ ವಿಶೇಷ ಸಾಧನೆಗಾಗಿ ಹಾಸನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಡಾ.ಎಂ.ಸಿ. ರಂಗಸ್ವಾಮಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಂಗಸ್ವಾಮಿ ಅವರು, ಕೆಂಪೇಗೌಡರು ಕೇವಲ ಬೆಂಗಳೂರನ್ನು ನಿರ್ಮಿಸಿದ ರಾಜರಲ್ಲ. ನಾಡಿನ ಅಭಿವೃದ್ಧಿ, ರೈತರ ಏಳಿಗೆ, ಕೃಷಿ ಮತ್ತು ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ನೀಡಿದ ದೂರದರ್ಶಿ ಆಡಳಿತಗಾರರು ಎಂದು ಬಣ್ಣಿಸಿದರು. ಅವರು ನಿರ್ಮಿಸಿದ ಕೆರೆ, ಕಟ್ಟೆಗಳು ಇಂದಿಗೂ ರೈತರ ಬದುಕಿಗೆ ಆಸರೆಯಾಗಿವೆ ಎಂದರು.
ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚ, ಮಾರುಕಟ್ಟೆಯ ಏರಿಳಿತಗಳ ನಡುವೆಯೂ ರೈತರು ಕೃಷಿಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ವಿದೇಶದಲ್ಲಿ ನೆಲೆಸಿದ್ದರೂ ಕೃಷಿ ಸಾಧಕರನ್ನು ಗುರುತಿಸಿ ಗೌರವಿಸುವುದು ರೈತ ಸಮುದಾಯಕ್ಕೆ ನೀಡಿದ ದೊಡ್ಡ ಗೌರವವಾಗಿದೆ. ಈ ಗೌರವವು ಕೃಷಿ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಅವರು ಹೇಳಿದರು ಕಾರ್ಯಕ್ರಮದಲ್ಲಿ ಮಂಗಳೂರಿನ ಪ್ರಸಿದ್ಧ ಧಾರ್ಮಿಕ ಮುಖಂಡ ಸಮಾಜ ಸೇವಕ ಶ್ರೀ ವಿನಯಾನಂದ ಕಾನಡ್ಕರವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು .
ಇಂತಹ ಕಾರ್ಯಕ್ರಮಗಳು ವಿದೇಶದಲ್ಲಿರುವ ಮುಂದಿನ ಪೀಳಿಗೆಗೆ ಕನ್ನಡ ಭಾಷೆ, ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜೊತೆಗೆ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಮಾನ್ನಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪರಸ್ಪರ ಸೌಹಾರ್ದತೆ, ಸಹಕಾರ ಮತ್ತು ಸಂಘಟನಾ ಮನೋಭಾವವನ್ನು ಬೆಳೆಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಒಮಾನ್ ಒಕ್ಕಲಿಗರ ಬಳಗದ ಪುಟ್ಟರಾಜಗೌಡ ಶಶಿಯಣ್ಣ, ರಾಮಕೃಷ್ಣ, ಎಸ್.ಟಿ. ಪ್ರಸಾದ್, ಮೋಹನ್, ಗಿರಿಪ್ರಸಾದ್, ಸಂತೋಷ್, ಜ್ಞಾನಕುಮಾರ್, ಮನು ರಾಜು ಗೌಡ ,ಪ್ರವೀಣ್, ಕುಮಾರ ಹನುಮಂತಪ್ಪ, ನಿಶ್ಚಿತ್ ಗೌಡ , ಅರುಣ್, ಪ್ರದೀಪ್, ಗುರು, ಯತೀಶ್, ಅಶ್ವತ್ ನಾರಾಯಣ , ಸದಾನಂದ ಗೌಡ ನಿಖಿತ್, ಕಾರ್ತಿಕ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.