ಇಸ್ಲಾಮಾಬಾದ್, ನ.12 (DaijiworldNews/AA): ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಕೊಹಾಟ್ನಲ್ಲಿ ಪೊಲೀಸ್ ವಾಹನಗಳ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 11 ಸಿಬ್ಬಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಅಕ್ರಮ ಚಿನ್ನದ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸಾಗುತ್ತಿದ್ದಪೊಲೀಸರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಡಿಎಸ್ಪಿ ಸೇರಿ 11 ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಐದು ಪೊಲೀಸ್ ವಾಹನಗಳಿಗೂ ಉಗ್ರರು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಈ ದಾಳಿಯ ಹೊಣೆಯನ್ನು ಟಿಟಿಪಿ ಉಗ್ರ ಸಂಘಟನೆ ಹೊತ್ತಿದೆ. ಸ್ಥಳದಲ್ಲಿ ಭದ್ರತಾ ಪಡೆಗಳು ಉಗ್ರರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಹುತಾತ್ಮರಾದ ಅಧಿಕಾರಿಗಳಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಈ ಗುಂಡಿನ ಚಕಮಕಿಯಲ್ಲಿ 18 ಖವಾರಿಜ್ ಕೂಡ ಹತರಾಗಿದ್ದಾರೆ. ದಾಳಿಕೋರರು ಅಪರಾಧ ಜಾಲಗಳೊಂದಿಗೆ ಶಾಮೀಲಾಗಿದ್ದರು. ಅಪರಾಧ ಜಾಲಗಳು ಮತ್ತು ಪಾಕಿಸ್ತಾನಿ ತಾಲಿಬಾನ್ ನಡುವಿನ ನಂಟನ್ನು ಈ ದಾಳಿ ಎತ್ತಿ ತೋರಿಸುತ್ತದೆ. ವಿದೇಶಿ ಶಕ್ತಿಗಳ ಕುಮ್ಮಕ್ಕಿನಿಂದ ಇವೆರಡೂ ಗುಂಪುಗಳು ಕೈಜೋಡಿಸಿವೆ. ಉಗ್ರರಿಗೆ ಮತ್ತು ಅಪರಾಧ ಜಾಲಗಳಿಗೆ ನೆರವು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.