ಟರ್ಕಿ, ನ.10 (DaijiworldNews/TA): ಇಜ್ಮಿರ್ ಪ್ರಾಂತ್ಯದಲ್ಲಿರುವ ಹಬಾಶ್ ಉಕ್ಕು ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 17 ಕಾರ್ಮಿಕರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಅಲಿಯಾಗಾ ಜಿಲ್ಲೆಯಲ್ಲಿರುವ ಕಬ್ಬಿಣ ಮತ್ತು ಉಕ್ಕು ತಯಾರಿಕಾ ಘಟಕದಲ್ಲಿ ಈ ದುರಂತ ಸಂಭವಿಸಿದೆ.

ಆರಂಭದಲ್ಲಿ 16 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಕಾರ್ಖಾನೆಯಲ್ಲಿ ದ್ರವ ಉಕ್ಕನ್ನು ಎರಕಹೊಯ್ಯುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಾಯ್ಲರ್ ಬದಲಾಯಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಬೃಹತ್ ಕ್ರೇನ್ ಕುಸಿದು ಕೈಗಾರಿಕಾ ಕುಲುಮೆಯ ಮೇಲೆ ಬಿದ್ದಿದೆ ಎನ್ನಲಾಗಿದೆ. ಪ್ರತ್ಯಕ್ಷದರ್ಶಿ ಕಾರ್ಮಿಕ ಯಾಸಿನ್ ಸೆಟಿನರ್ ನೀಡಿರುವ ಮಾಹಿತಿಯಂತೆ, ಕ್ರೇನ್ನ ಹಗ್ಗ ತುಂಡಾದ ಪರಿಣಾಮ ಸುಮಾರು 120 ಟನ್ಗಳಷ್ಟು ಕುದಿಯುತ್ತಿದ್ದ ದ್ರವ ಉಕ್ಕು ಕುಲುಮೆಯ ಮೇಲೆ ಬಿದ್ದಿದೆ. ಈ ವೇಳೆ ಕುಲುಮೆಯಲ್ಲಿದ್ದ ವಾಟರ್ ಕೂಲ್ಡ್ ಪ್ಯಾನೆಲ್ಗಳ ನೀರು ಮತ್ತು ಕಾದ ದ್ರವ ಉಕ್ಕಿನ ಸಂಪರ್ಕದಿಂದ ಭಾರೀ ಹೈಡ್ರೋಜನ್ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಪ್ರದೇಶವೇ ನಡುಗಿದ ಅನುಭವವಾಗಿದೆ. ಕಾರ್ಖಾನೆಯ ಮೇಲ್ಛಾವಣಿಯೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿತ್ತು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಡೆನಿಜ್ ಉಲ್ಕರ್ ಘಟನೆ ಭೀಕರತೆಯನ್ನು ವಿವರಿಸಿದ್ದಾರೆ. ದುರಂತದ ಬಳಿಕ ಕಾರ್ಖಾನೆಯ ಸುರಕ್ಷತಾ ವ್ಯವಸ್ಥೆ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯಲ್ಲಿ ಸಹೋದರನನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಕಾರ್ಖಾನೆಯ ಹೊರಭಾಗದಲ್ಲಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಸಾರ್ವಜನಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಕಾರ್ಮಿಕರ ಸುರಕ್ಷತೆಯಲ್ಲಿನ ಲೋಪಗಳನ್ನು ಖಂಡಿಸಿ ಹೇಳಿಕೆ ನೀಡಲು ಮುಂದಾದ ಇಜಿಯನ್ ವರ್ಕರ್ಸ್ ಕಲೆಕ್ಟಿವ್ ಸಂಘಟನೆಯ ಇಬ್ಬರು ಪ್ರತಿನಿಧಿಗಳನ್ನು ಪೊಲೀಸರು ಆಸ್ಪತ್ರೆಯ ಬಳಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಂಘಟನೆಯ ವಕ್ತಾರ ಒಕ್ಟಾಯ್ ಟರ್ಕ್, ಕಾರ್ಖಾನೆಯ ಆಡಳಿತ ಮಂಡಳಿಯ ಲಾಭದ ದುರಾಸೆಯೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಇದೇ ಕಾರ್ಖಾನೆಯಲ್ಲಿ ಸಂಭವಿಸಿದ ವಿವಿಧ ಅಪಘಾತಗಳಲ್ಲಿ 11 ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಮೂರು ವಾರಗಳಲ್ಲಿ ನಡೆದ ಮೂರನೇ ಗಂಭೀರ ಅಪಘಾತ ಇದಾಗಿದೆ ಎನ್ನಲಾಗಿದೆ. ಘಟನೆಯ ಬೆನ್ನಲ್ಲೇ ಕಾರ್ಖಾನೆಯ ಸುರಕ್ಷತಾ ವ್ಯವಸ್ಥೆ, ನಿರ್ವಹಣಾ ಲೋಪ ಹಾಗೂ ಕಾರ್ಮಿಕರ ಜೀವ ರಕ್ಷಣೆಗೆ ಕೈಗೊಂಡಿದ್ದ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ದುರಂತದ ನಿಖರ ಕಾರಣ ಮತ್ತು ಹೊಣೆಗಾರಿಕೆ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.