ಟೋಕಿಯೊ, ನ.08 (DaijiworldNews/AA): ಜಪಾನ್ನಲ್ಲಿ ಭಾನುವಾರ ಮುಂಜಾನೆ 5.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 22 ಜನರು ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ 1:04ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಶಿಜುವೊಕಾ ಪ್ರಾಂತ್ಯದಲ್ಲಿ ಭೂಮಿಯ ಮೇಲ್ಮೈಯಿಂದ ಸುಮಾರು 40 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪದ ತೀವ್ರತೆಗೆ ಅಂಗಡಿಗಳ ಕಿಟಕಿ ಗಾಜುಗಳು ಪುಡಿಯಾಗಿದ್ದು, ಕಟ್ಟಡಗಳಲ್ಲಿದ್ದ ಜನರು ಭಯಭೀತರಾಗಿ ಹೊರಗೆ ಓಡಿಬಂದಿದ್ದಾರೆ.
ಜಪಾನ್ ಹವಾಮಾನ ಇಲಾಖೆ ಭೂಕಂಪದ ತೀವ್ರತೆಯನ್ನು 5.7 ಎಂದು ದಾಖಲಿಸಿದೆ. ಆದರೆ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ 5.5 ತೀವ್ರತೆ ಎಂದು ತಿಳಿಸಿದೆ. ಭೂಕಂಪದ ಬಳಿಕ ಸಣ್ಣ ಪ್ರಮಾಣದ ಕಂಪನಗಳೂ ಸಂಭವಿಸಿವೆ. ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ.
ಐಚಿ ಪ್ರಾಂತ್ಯದ ಸುತ್ತಮುತ್ತಲಿನ ವಿಶಾಲ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಹಮಾಮಟ್ಸು ನಗರ, ಐತಿಹಾಸಿಕ ನಗರಗಳಾದ ಕ್ಯೋಟೋ ಮತ್ತು ನಾರಾ ಸೇರಿದಂತೆ ಯಮನಾಶಿ ಹಾಗೂ ಗಿಫು ಪ್ರಾಂತ್ಯಗಳಲ್ಲಿ, ಮೌಂಟ್ ಫ್ಯೂಜಿ ಇರುವ ಪ್ರದೇಶದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದೆ.