ಟೆಹ್ರಾನ್, ,ನ.06 (DaijiworldNews/AK): ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತೀವ್ರಗೊಳ್ಳುವ ಆತಂಕದ ನಡುವೆಯೇ, ಇರಾನ್ ಅಮೆರಿಕಕ್ಕೆ ಹೊಸ ಪರಮಾಣು ಪ್ರಸ್ತಾವನೆಯನ್ನು ಕಳುಹಿಸಿದೆ.

ಕತಾರ್ ಮೂಲಕ ಈ ಪ್ರಸ್ತಾವನೆ ವಾಷಿಂಗ್ಟನ್ಗೆ ತಲುಪಿದೆ ಎಂದು ಇರಾನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಪ್ರಸ್ತಾವನೆ ಕುರಿತು ಮಾತುಕತೆ ಆರಂಭಿಸುವ ಮೊದಲು ಅಮೆರಿಕವು ಇರಾನ್ ಮುಂದಿಟ್ಟಿರುವ ಏಳು ಷರತ್ತುಗಳನ್ನು ಈಡೇರಿಸಬೇಕು ಎಂಬುದು ಟೆಹ್ರಾನ್ನ ನಿಲುವು. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಮತ್ತೆ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ.
ಇರಾನ್ನ ಏಳು ಷರತ್ತುಗಳು:
ಇರಾನ್ ತನ್ನ ಏಳು ಷರತ್ತುಗಳ ಅಧಿಕೃತ ಸಂಪೂರ್ಣ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ. ಆದರೆ ಮಾಧ್ಯಮ ವರದಿಗಳ ಪ್ರಕಾರ, ಟೆಹ್ರಾನ್ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಇಂತಿವೆ:
ಯುದ್ಧಕ್ಕೆ ಸಂಪೂರ್ಣ ವಿರಾಮ: ಇರಾನ್ ಮಾತ್ರವಲ್ಲದೆ ಲೆಬನಾನ್ ಸೇರಿದಂತೆ ಮಧ್ಯಪ್ರಾಚ್ಯದ ಎಲ್ಲ ಸಂಘರ್ಷಗಳಿಗೂ ಅಂತ್ಯ ಹಾಡಬೇಕು.
ನೌಕಾ ದಿಗ್ಬಂಧನ ತೆರವು: ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ನಿರ್ಬಂಧವನ್ನು ತೆಗೆದುಹಾಕಬೇಕು. ಆರ್ಥಿಕ ನಿರ್ಬಂಧ ತೆರವು: ಇರಾನ್ ಮೇಲೆ ವಿಧಿಸಿರುವ ಅಮೆರಿಕದ ನಿರ್ಬಂಧಗಳನ್ನು ತೆಗೆದುಹಾಕಬೇಕು.
ಫ್ರೀಜ್ ಹಣ ಬಿಡುಗಡೆ: ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್ನ ಆಸ್ತಿಗಳನ್ನು ಬಿಡುಗಡೆ ಮಾಡಬೇಕು.
ಅಮೆರಿಕದ ಸೇನಾ ಉಪಸ್ಥಿತಿ ಕಡಿತ: ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಅಥವಾ ಅವುಗಳ ಉಪಸ್ಥಿತಿಯನ್ನು ಕಡಿಮೆ ಮಾಡಬೇಕು.
ಯುದ್ಧದ ನಷ್ಟಕ್ಕೆ ಪರಿಹಾರ: ಅಮೆರಿಕದ ದಾಳಿಯಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕು.
ಮತ್ತೆ ದಾಳಿ ನಡೆಸದ ಭರವಸೆ: ಇರಾನ್ ಮೇಲೆ ಅಮೆರಿಕದ ದಾಳಿಗಳನ್ನು ನಿಲ್ಲಿಸಿ, ಭವಿಷ್ಯದಲ್ಲಿ ಮತ್ತೆ ದಾಳಿ ನಡೆಸುವುದಿಲ್ಲ ಎಂಬ ಖಾತರಿ ನೀಡಬೇಕು.
ಇರಾನ್ನ ಉನ್ನತ ಭದ್ರತಾ ಅಧಿಕಾರಿ ಮೊಹ್ಸೆನ್ ರೆಜೈ ಅವರು ಅಮೆರಿಕ ತನ್ನ ಏಳು ಷರತ್ತುಗಳನ್ನು ಈಡೇರಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಮತ್ತು ಮಾತುಕತೆಯನ್ನೂ ನಡೆಸುವುದಿಲ್ಲ ಎಂದು ಹೇಳಿದ್ದಾರೆ.