ಫ್ಲೋರಿಡಾ, ನ.02 (DaijiworldNews/AA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಕೆಲವೇ ಮೈಲುಗಳ ದೂರದಲ್ಲಿ ಖಾಸಗಿ ವಿಮಾನವೊಂದು ಪತನಗೊಂಡಿದ್ದು, 9 ಮಂದಿ ಮೃತಪಟ್ಟಿದ್ದಾರೆ.

ಭಾನುವಾರ ಮಧ್ಯಾಹ್ನ ಟೆಕ್ಸಾಸ್ನ ಆಸ್ಟಿನ್-ಬರ್ಗ್ಸ್ಟ್ರೋಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್ಗೆ ಈ ವಿಮಾನ ತೆರಳುತ್ತಿತ್ತು. ಬಳಿಕ ಮಧ್ಯಾಹ್ನ ಸುಮಾರು 12:50ಕ್ಕೆ ಪಾಮ್ ಬೀಚ್ ಕೌಂಟಿಯ ಗ್ರೀನ್ಏಕರ್ಸ್ ಬಳಿ ವಿಮಾನ ಪತನಗೊಂಡಿದೆ.
ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿರುವ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್ಹ್ಯಾವನ್ ವಸತಿ ಪ್ರದೇಶದ ಬಳಿ ಈ ಭೀಕರ ವಿಮಾನ ಅಪಘಾತ ಸಂಭವಿಸಿದೆ. ರಸ್ತೆಯ ಪಕ್ಕದಲ್ಲೇ ಬಿದ್ದ ವಿಮಾನವು ತಕ್ಷಣವೇ ಸ್ಫೋಟಗೊಂಡಿತ್ತು. ವಿಮಾನವು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸ್ಥಳದಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೊಂದು ಭೀಕರ ದುರಂತ. ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ಹೇಳಿದ್ದಾರೆ. "ನೆಲದ ಮೇಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ. ಇದು ಅತ್ಯಂತ ವಿನಾಶಕಾರಿ ಅಪಘಾತ. ವಿಮಾನವು ಕ್ಷಿಪಣಿಯಂತೆ ವೇಗವಾಗಿ ಕೆಳಗೆ ಬಂದು ರಸ್ತೆಯ ಬದಿಯಲ್ಲಿ ಬಿದ್ದಿದೆ" ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ.
ವಿಮಾನವು ನಿಮಿಷಕ್ಕೆ 10,000 ಅಡಿ, ನಂತರ 20,000 ಅಡಿ ಹಾಗೂ ಕೊನೆಗೆ 30,000 ಅಡಿಗಳವರೆಗೆ ಅತಿಯಾದ ವೇಗದಲ್ಲಿ ಕೆಳಮುಖವಾಗಿ ಧರೆಗುರುಳಿತು. ಅಪಘಾತ ಸಂಭವಿಸಿದ ಸ್ಥಳದ ಸಮೀಪದಲ್ಲಿದ್ದ ಮೊಬೈಲ್ ಹೋಮ್ ಸಮುದಾಯದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 600 ಜನರನ್ನು ಸ್ಥಳಾಂತರಿಸಲಾಗಿದೆ. ಘಟನೆಯ ಕುರಿತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಮತ್ತು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಜಂಟಿಯಾಗಿ ತನಿಖೆ ಆರಂಭಿಸಿವೆ.