ಸಾರಾಯೇವೋ, ಅ.30 (DaijiworldNews/AA): ಬೋಸ್ನಿಯಾ ಮತ್ತು ಹರ್ಜೆಗೋವಿನಾ ನಡುವೆ ಶಾಂತಿಪಾಲನಾ ಕಾರ್ಯಾಚರಣೆ ನಡೆಸುತ್ತಿದ್ದ ಇಟಾಲಿಯನ್ ಸೇನಾ 'ಸಿಎಚ್-47 ಚಿನೂಕ್' ಹೆಲಿಕಾಪ್ಟರ್ ಪತನಗೊಂಡಿದೆ. ಈ ವೇಳೆ ಹೆಲಿಕಾಪ್ಟರ್ನಲ್ಲಿದ್ದ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.

ಅ.29 ರಂದು ಬ್ರ್ಕೊ ಸಮೀಪದ ಗೊರೈಸ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಗಾಯಗೊಂಡ 11 ಸಿಬ್ಬಂದಿ ಆರೋಗ್ಯ ಸ್ಥಿರವಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಬೋಸ್ನಿಯಾ ಮತ್ತು ಹರ್ಜೆಗೋವಿನಾದ ತುರ್ತು ಸೇವಾ ಸಿಬ್ಬಂದಿ ಹಾಗೂ EUFOR ನ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ರಕ್ಷಿಸಿ ಬ್ರ್ಕೊದಲ್ಲಿರುವ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ ಎಂದು ಎಂದು ಯುರೋಪಿಯನ್ ಒಕ್ಕೂಟದ ಪಡೆ ತಿಳಿಸಿದೆ.
ಈ ಅಪಘಾತದಲ್ಲಿ ಯಾವುದೇ ನಾಗರಿಕರಿಗೆ ಗಾಯಗಳಾಗಿಲ್ಲ ಮತ್ತು ನಾಗರಿಕ ಮೂಲಸೌಕರ್ಯ, ಆಸ್ತಿಪಾಸ್ತಿ ಅಥವಾ ವಾಹನಗಳಿಗೆ ಯಾವುದೇ ಹಾನಿಯಾಗಿಲ್ಲ. ಅಪಘಾತಕ್ಕೆ ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿ, ಅದು ದೃಢಪಟ್ಟ ಬಳಿಕ ಹಂಚಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಬ್ಬಂದಿಯ ಗುರುತು ಅಥವಾ ರಾಷ್ಟ್ರೀಯತೆಯ ಬಗ್ಗೆ ತಪ್ಪು ಮಾಹಿತಿ ಹರಡದಂತೆ ಸಾರ್ವಜನಿಕರಲ್ಲಿ EUFOR ಮನವಿ ಮಾಡಿದೆ. ಅಧಿಕೃತ ಮಾಹಿತಿಯನ್ನು ತಮ್ಮ ಮಾಧ್ಯಮಗಳಿಂದ ಪಡೆಯುವಂತೆ ಸೂಚಿಸಲಾಗಿದೆ. ಈ ಹೆಲಿಕಾಪ್ಟರ್ ಬೋಸ್ನಿಯಾ ಮತ್ತು ಹರ್ಜೆಗೋವಿನಾದಲ್ಲಿ ಯುರೋಪಿಯನ್ ಒಕ್ಕೂಟದ ಶಾಂತಿಪಾಲನಾ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.