ಟೆಲ್ ಅವಿವ್, ಅ.04 (DaijiworldNews/TA): ವಿಮಾನದಲ್ಲಿ ನಡೆದ ಭೀಕರ ದಾಳಿಯ ನಡುವೆಯೂ ನೂರಾರು ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿಶೇಷ ಗೌರವ ನೀಡಿದ್ದಾರೆ.

2027ರ ಮೇ ತಿಂಗಳಲ್ಲಿ ನಡೆಯಲಿರುವ ಇಸ್ರೇಲ್ನ ಸ್ವಾತಂತ್ರ್ಯ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗೆ ನೆತನ್ಯಾಹು ಅಧಿಕೃತ ಆಹ್ವಾನ ನೀಡಿದ್ದಾರೆ. ಸಾಮಾನ್ಯವಾಗಿ ಈ ಗೌರವ ಇಸ್ರೇಲಿ ನಾಗರಿಕರಿಗೆ ಮಾತ್ರ ಸೀಮಿತವಾಗಿರುತ್ತದೆ. ಇದೀಗ ಭಾರತೀಯರಿಗೆ ಈ ವಿಶೇಷ ಅವಕಾಶ ನೀಡುತ್ತಿರುವುದು ಗಮನ ಸೆಳೆದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾಪ್ಟನ್ ಸ್ಮಿತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನೆತನ್ಯಾಹು, ಅವರ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತ ಮತ್ತು ಇಸ್ರೇಲ್ನ ಧೈರ್ಯಶಾಲಿ ಜನರ ನಿಜವಾದ ಹೀರೋ ಸ್ಮಿತ್ ಎಂದು ಬಣ್ಣಿಸಿದ ಅವರು, ಇಡೀ ಜಗತ್ತಿನ ಹೀರೋ ಕೂಡ ನೀವೇ ಎಂದು ಹೇಳಿದ್ದಾರೆ. ಈ ಸಂಭಾಷಣೆಯ ವಿಡಿಯೋವನ್ನು ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದೆ.
ವಿಮಾನದಲ್ಲಿ ಸಹ ಪೈಲಟ್ ಆಗಿದ್ದ ಹಮಾಮ್ ಅಲ್ಹಮಾಮಿ, ಕ್ಯಾಪ್ಟನ್ ಸ್ಮಿತ್ ಅವರ ಮೇಲೆ ಭೀಕರ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಪ್ರಾರ್ಥನೆ ಸಲ್ಲಿಸಲು ಐದು ನಿಮಿಷಗಳ ಕಾಲ ಸಮಯ ನೀಡುವಂತೆ ಸ್ಮಿತ್ ಬಳಿ ಆತ ಮನವಿ ಮಾಡಿದ್ದ. ಪ್ರಾರ್ಥನೆಯ ವೇಳೆ ಗೌರವದ ದೃಷ್ಟಿಯಿಂದ ಸ್ಮಿತ್ ಹಿಂದೆ ತಿರುಗಿ ನೋಡಿರಲಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡ ಅಲ್ಹಮಾಮಿ, ಕೆಲವೇ ನಿಮಿಷಗಳ ಬಳಿಕ ಕ್ರ್ಯಾಶ್ ಕೊಡಲಿಯಿಂದ ಸ್ಮಿತ್ ಅವರ ತಲೆಯ ಹಿಂಭಾಗಕ್ಕೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಿಂದ ಬೆಚ್ಚಿಬಿದ್ದ ಸ್ಮಿತ್ ಕಾಕ್ಪಿಟ್ನ ಬಾಗಿಲು ತೆರೆದು ಜೋರಾಗಿ ಕಿರುಚಿಕೊಂಡಿದ್ದಾರೆ. ಇದನ್ನು ಗಮನಿಸಿದ ವಿಮಾನದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ತಕ್ಷಣ ಕಾಕ್ಪಿಟ್ಗೆ ಧಾವಿಸಿ, ಸಹಾಯಕ್ಕಾಗಿ ಇತರ ಪ್ರಯಾಣಿಕರನ್ನು ಕರೆದಿದ್ದಾರೆ.
ಕಾಕ್ಪಿಟ್ನಲ್ಲಿನ ಪರಿಸ್ಥಿತಿ ಅರಿತ ಮುಂಭಾಗದ ಸೀಟುಗಳಲ್ಲಿದ್ದ ಹಲವು ಇಸ್ರೇಲಿ ಪ್ರಯಾಣಿಕರು ತಕ್ಷಣ ಅಲ್ಲಿಗೆ ಧಾವಿಸಿದ್ದಾರೆ. ದಾಳಿ ನಡೆಸುತ್ತಿದ್ದ ಓಮನ್ ಮೂಲದ ಸಹ ಪೈಲಟ್ ಅಲ್ಹಮಾಮಿಯನ್ನು ಹಿಡಿದು ನಿಯಂತ್ರಣಕ್ಕೆ ತಂದಿದ್ದಾರೆ. ಈ ಗೊಂದಲದ ನಡುವೆ ವಿಮಾನವನ್ನು ಸುರಕ್ಷಿತವಾಗಿ ನಿಯಂತ್ರಿಸುವ ಜವಾಬ್ದಾರಿಯನ್ನು ವಿಮಾನದಲ್ಲಿದ್ದ ಟ್ರಕ್ ಚಾಲಕರೊಬ್ಬರು ವಹಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ವಿಮಾನವನ್ನು ಪತನಗೊಳಿಸುವ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಸಹ ಪೈಲಟ್ ಹಮಾಮ್ ಅಲ್ಹಮಾಮಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಯುಎಇ, ಸೌದಿ ಅರೇಬಿಯಾ ಮತ್ತು ಇಸ್ರೇಲ್ನ ತನಿಖಾ ಸಂಸ್ಥೆಗಳು ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿವೆ. ನೂರಾರು ಪ್ರಯಾಣಿಕರ ಜೀವ ಉಳಿಸುವಲ್ಲಿ ಕ್ಯಾಪ್ಟನ್ ಸ್ಮಿತ್ ತೋರಿದ ಧೈರ್ಯ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೇ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಅವರಿಗೆ ವಿಶೇಷ ಗೌರವ ನೀಡಲು ಮುಂದಾಗಿದ್ದಾರೆ.