ಜೆರುಸಲಂ, ಅ.03 (DaijiworldNews/TA): ಹಾರ್ಮೂಸ್ ಜಲಸಂಧಿಯಲ್ಲಿ ಕುವೈತ್ ಧ್ವಜ ಹೊಂದಿದ್ದ ಕಚ್ಚಾ ತೈಲ ಸಾಗಣೆ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

‘ಎಂಟಿ ಕಾಜಿಮಾ III’ ಹೆಸರಿನ ಕಚ್ಚಾ ತೈಲ ಟ್ಯಾಂಕರ್ ದಾಳಿಗೆ ಗುರಿಯಾಗಿದೆ. ಘಟನೆಯ ಬಳಿಕ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸುರಕ್ಷತೆ ಕುರಿತು ಆತಂಕ ಮೂಡಿತ್ತು. ಆದರೆ, ಓಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮಾಹಿತಿ ನೀಡಿದ್ದು, ಟ್ಯಾಂಕರ್ನಲ್ಲಿದ್ದ ಎಲ್ಲ ಐವರು ಭಾರತೀಯ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿದೆ. ಕುವೈತ್ ಧ್ವಜದ ಅಡಿಯಲ್ಲಿ ಕಚ್ಚಾ ತೈಲ ಸಾಗಿಸುತ್ತಿದ್ದ ಈ ಟ್ಯಾಂಕರ್ ಹಾರ್ಮೂಸ್ ಜಲಸಂಧಿ ಮೂಲಕ ಸಾಗುತ್ತಿದ್ದ ವೇಳೆ ದಾಳಿಗೆ ಒಳಗಾಗಿದೆ. ದಾಳಿಯ ಸ್ವರೂಪ ಹಾಗೂ ಅದರ ಹಿಂದಿನ ಕಾರಣಗಳ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಹಾರ್ಮೂಸ್ ಜಲಸಂಧಿಯು ಜಾಗತಿಕ ತೈಲ ಸಾಗಣೆಯ ಪ್ರಮುಖ ಸಮುದ್ರ ಮಾರ್ಗವಾಗಿದ್ದು, ಪ್ರತಿದಿನ ಅಪಾರ ಪ್ರಮಾಣದ ಇಂಧನ ಈ ಮಾರ್ಗದ ಮೂಲಕ ಸಾಗಾಟವಾಗುತ್ತದೆ. ಹೀಗಾಗಿ, ಇಲ್ಲಿ ಸಂಭವಿಸುವ ಯಾವುದೇ ಭದ್ರತಾ ಘಟನೆಗಳು ಅಂತಾರಾಷ್ಟ್ರೀಯ ತೈಲ ಸಾಗಾಟ ಮತ್ತು ಸಮುದ್ರ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೊಂದಿವೆ. ಘಟನೆಯ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಗಮನಿಸಿದ್ದು, ಭಾರತೀಯ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಂಡಿದೆ. ದಾಳಿಯ ಕುರಿತು ಸಂಬಂಧಿತ ಅಧಿಕಾರಿಗಳಿಂದ ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.