ಜೂರಿಚ್, ಸೆ.25 (DaijiworldNews/TA): ಸ್ವಿಟ್ಜರ್ಲೆಂಡ್ನ ಜೂರಿಚ್ನಿಂದ ದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದ ಸಹ ಪೈಲಟ್ ಮದ್ಯಪಾನ ಮಾಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಸೆಪ್ಟೆಂಬರ್ 6ರಂದು ಈ ಘಟನೆ ನಡೆದಿದ್ದು, AI 151 ವಿಮಾನ ಟೇಕ್ಆಫ್ಗೆ ಸಿದ್ಧವಾಗುತ್ತಿದ್ದ ವೇಳೆ ಸಹ ಪೈಲಟ್ ಮದ್ಯಪಾನ ಮಾಡಿರುವ ಅನುಮಾನ ಅಧಿಕಾರಿಗಳಿಗೆ ವ್ಯಕ್ತವಾಗಿದೆ. ತಕ್ಷಣ ಅವರನ್ನು ಕಾಕ್ಪಿಟ್ನಿಂದ ಕೆಳಗಿಳಿಸಿ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಪರೀಕ್ಷೆಯಲ್ಲಿ ಅವರು ಮದ್ಯಪಾನ ಮಾಡಿರುವುದು ದೃಢಪಟ್ಟಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಘಟನೆ ಬಳಿಕ ಸಹ ಪೈಲಟ್ ಅವರನ್ನು ಸಂಸ್ಥೆ ಅಮಾನತುಗೊಳಿಸಿದ್ದು, ಇದೀಗ ದ್ವಿತೀಯ ಹಂತದ ವೈದ್ಯಕೀಯ ಪರೀಕ್ಷೆಯ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ. ಅಂತಿಮ ವೈದ್ಯಕೀಯ ವರದಿ ಬರುವವರೆಗೆ ಅಮಾನತು ಮುಂದುವರಿಯಲಿದೆ ಎಂದು ಏರ್ ಇಂಡಿಯಾ ಹೇಳಿದೆ. ಸಹ ಪೈಲಟ್ಗೆ ಸಂಬಂಧಿಸಿದ ಈ ಘಟನೆ ಹಿನ್ನೆಲೆಯಲ್ಲಿ ಅಂದು AI 151 ವಿಮಾನದ ಕಾರ್ಯಾಚರಣೆ ರದ್ದುಗೊಂಡಿದ್ದು, ಮರುದಿನ ವಿಮಾನ ಭಾರತಕ್ಕೆ ಆಗಮಿಸಿತು. ಘಟನೆ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ವಿಮಾನ ಸುರಕ್ಷತೆ ಮತ್ತು ನಿಯಮ ಉಲ್ಲಂಘನೆಯ ವಿಚಾರದಲ್ಲಿ ಸಂಸ್ಥೆ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸುತ್ತದೆ ಎಂದು ಹೇಳಿದೆ. ನಿಯಮ ಉಲ್ಲಂಘನೆ ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ ಆಗಸ್ಟ್ 4ರಂದು ಫುಕೆಟ್ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪೈಲಟ್ಗೆ ಸಂಬಂಧಿಸಿದ ಮತ್ತೊಂದು ಘಟನೆ ವರದಿಯಾಗಿತ್ತು.AI-2379 ವಿಮಾನದಲ್ಲಿ 137 ಪ್ರಯಾಣಿಕರು ಹಾಗೂ 8 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಒಡಿಶಾ ವಾಯುಪ್ರದೇಶದಲ್ಲಿ ವಿಮಾನವು ಹಠಾತ್ತನೆ ಸುಮಾರು 300 ಅಡಿ ಕೆಳಕ್ಕೆ ಇಳಿದಿದ್ದು, ಘಟನೆಯಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ಬಳಿಕ ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು.
ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ವಿಮಾನದ ಪೈಲಟ್ ಸುದೀಪ್ ವಸಿಷ್ಠ ಅವರ ಡೋಪ್ ಟೆಸ್ಟ್ನಲ್ಲಿ ಗಾಂಜಾ ಸೇವನೆಯ ಪರೀಕ್ಷೆ ಪಾಸಿಟಿವ್ ಬಂದಿದೆ ಎಂದು ವರದಿಯಾಗಿತ್ತು. ಬಳಿಕ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ನಿದ್ರೆಯ ಸಮಸ್ಯೆ ಹಿನ್ನೆಲೆಯಲ್ಲಿ ಔಷಧಿ ಸೇವಿಸುತ್ತಿದ್ದುದಾಗಿ ಅವರು ತನಿಖಾಧಿಕಾರಿಗಳಿಗೆ ತಿಳಿಸಿದ್ದರು ಎಂದು ವರದಿಯಾಗಿದೆ. ಈ ಘಟನೆಗಳ ಬಳಿಕ ಏರ್ ಇಂಡಿಯಾ ತನ್ನ ಎಲ್ಲಾ ಪೈಲಟ್ಗಳಿಗೆ ವಿಮಾನ ಹಾರಾಟಕ್ಕೂ ಮುನ್ನ ಕಡ್ಡಾಯ ಡೋಪ್ ಟೆಸ್ಟ್ ನಡೆಸುವಂತೆ ಸೂಚಿಸಿತ್ತು.