ಮಸ್ಕತ್, ಸೆ.24 (DaijiworldNews/AK): ಭಾರತಕ್ಕೆ ತೆರಳುತ್ತಿದ್ದ `ಎಂವಿ ಕೇಪ್ ಡಾವೊ’ ವಾಣಿಜ್ಯ ಹಡಗಿನ ಮೇಲೆ ಓಮನ್ನ ಪೂರ್ವ ಕರಾವಳಿ ಬಳಿ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾರೆ.

ಮೃತರನ್ನು ಉತ್ತರ ಪ್ರದೇಶದ ದಿಯೋರಿಯಾ ಮೂಲದ ವೈಪರ್ ಸೂರಜ್ ಯಾದವ್ ಎಂದು ಗುರುತಿಸಲಾಗಿದೆ. ಘಟನೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಬುಧವಾರ ಖಂಡಿಸಿದೆ.
ಹಡಗಿನಲ್ಲಿದ್ದ ಭಾರತೀಯ ನಾವಿಕರ ಪೈಕಿ 19 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಭಾರತೀಯ ಪ್ರಜೆ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ದೃಢಪಡಿಸಿದೆ.
ಘಟನೆಯಲ್ಲಿ ಮೃತಪಟ್ಟ ಸೂರಜ್ ಯಾದವ್ ಅವರ ಕುಟುಂಬಕ್ಕೆ ವಿದೇಶಾಂಗ ಸಚಿವಾಲಯ ಸಂತಾಪ ಸೂಚಿಸಿದೆ. ದಾಳಿ ನಡೆದಿರುವ ಕುರಿತು ಓಮನ್ ಅಧಿಕಾರಿಗಳೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದೆ ಎಂದು ಸಚಿವಾಲಯ ತಿಳಿಸಿದೆ. ಓಮನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ರಕ್ಷಿಸಲ್ಪಟ್ಟ ಭಾರತೀಯ ನಾವಿಕರನ್ನು ಶೀಘ್ರವಾಗಿ ಭಾರತಕ್ಕೆ ಕರೆತರಲು ಓಮನ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಎಂಇಎ ತಿಳಿಸಿದೆ.