ವಾಷಿಂಗ್ಟನ್,ಸೆ.24 (DaijiworldNews/AK): ಮೂರು ದಿನಗಳ ಅಮೆರಿಕ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಬುಧವಾರ ವಾಷಿಂಗ್ಟನ್ಗೆ ಬಂದಿಳಿದಿದ್ದಾರೆ. ಇದು ದಶಕಕ್ಕೂ ಹೆಚ್ಚು ಕಾಲದ ಬಳಿಕ ಅವರ ಮೊದಲ ಅಮೆರಿಕ ಭೇಟಿಯಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ, ಕೃತಕ ಬುದ್ಧಿಮತ್ತೆ (AI), ನಿರ್ಣಾಯಕ ಖನಿಜಗಳು, ತೈವಾನ್ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳ ಕುರಿತು ಉನ್ನತ ಮಟ್ಟದ ಮಾತುಕತೆ ನಡೆಯುವ ಸಾಧ್ಯತೆಗಳಿವೆ.
ಸೆಪ್ಟೆಂಬರ್ 23 ರಿಂದ 25ರ ವರೆಗೆ ನಡೆಯಲಿರುವ ಈ ಭೇಟಿಯು ಅಧಿಕೃತ ಶ್ವೇತಭವನದ ಸಭೆಗೂ ಮುನ್ನವೇ ಗಮನ ಸೆಳೆದಿದೆ. ಇದಕ್ಕೆ ಪ್ರಮುಖ ಕಾರಣ, ಟ್ರಂಪ್ ಅವರು ಸ್ವತಃ ಜಾಯಿಂಟ್ ಬೇಸ್ ಆಂಡ್ರ್ಯೂಸ್ ಸೇನಾ ನೆಲೆಗೆ ತೆರಳಿ ಕ್ಸಿ ಜಿನ್ಪಿಂಗ್ ಅವರನ್ನ ಸ್ವಾಗತಿಸಿರುವುದು. ಟ್ರಂಪ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಮೇರಿಲ್ಯಾಂಡ್ನ ಸೇನಾ ನೆಲೆಯಲ್ಲಿ ಕ್ಸಿ ಜಿನ್ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ಅವರನ್ನ ಬರಮಾಡಿಕೊಂಡರು.
ವಿದೇಶಿ ನಾಯಕರನ್ನು ವಿಮಾನ ನಿಲ್ದಾಣದಲ್ಲೇ ಅಮೆರಿಕ ಅಧ್ಯಕ್ಷರು ವೈಯಕ್ತಿಕವಾಗಿ ಸ್ವಾಗತಿಸುವುದು ಇತ್ತೀಚಿನ ದಶಕಗಳಲ್ಲಿ ಅಪರೂಪವಾಗಿರುವ ಹಿನ್ನೆಲೆ ಈ ನಡೆ ವಿಶೇಷ ಗಮನ ಸೆಳೆದಿದೆ.