ಕಾಬೂಲ್, ಸೆ.21 (DaijiworldNews/AA): ಅಫ್ಘಾನಿಸ್ತಾನದಲ್ಲಿನ ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿ ನಡೆಸಿದ್ದು, 28 ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಆದರೆ, ಕಬೂಲ್ನಲ್ಲಿರುವ ಅಧಿಕಾರಿಗಳು, ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶುಕ್ರವಾರ ವಾಯುವ್ಯ ಖೈಬರ್ ಪಖ್ತುಂಕ್ವಾ (ಕೆಪಿ) ಪ್ರಾಂತ್ಯದ ಕೊಹತ್ ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಯೊಂದರ ಮೇಲೆ ನಡೆದ ದಾಳಿಯಲ್ಲಿ 17 ಪೊಲೀಸರು ಸೇರಿದಂತೆ ಒಟ್ಟು 23 ಮಂದಿ ಮೃತಪಟ್ಟಿದ್ದರು. ಸೋಮವಾರದ ವೈಮಾನಿಕ ದಾಳಿಗಳು ಈ ಘಟನೆಯ ನಂತರ ನಡೆದಿವೆ. ಅಲ್ಲದೆ, ಭಾನುವಾರ ಕೆಪಿಯ ಹಂಗು ಪ್ರದೇಶದಲ್ಲಿ ಉಗ್ರಗಾಮಿಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಸೇನೆಯ ಐವರು ಯೋಧರು ಕೂಡ ಮೃತಪಟ್ಟಿದ್ದಾರೆ ಎಂದು ಪಾಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ದಾಳಿಯು ಕುನಾರ್ ಪ್ರಾಂತ್ಯದ ಒಂದು ಮನೆಯ ಮೇಲೆ ಅಪ್ಪಳಿಸಿದೆ. ಇದರಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ನ ಉಪ ವಕ್ತಾರ ಹಮ್ದುಲ್ಲಾ ಫಿತ್ರತ್ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.