ಕಾಬೂಲ್, ಸೆ.21 (DaijiworldNews/TA): ಗಡಿಯಾಚೆಗಿನ ಉಗ್ರ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಸೋಮವಾರ ಮುಂಜಾನೆ ಅಫ್ಘಾನಿಸ್ತಾನದ ಕುನಾರ್ ಮತ್ತು ಪಕ್ತಿಕಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಕುನಾರ್ ಪ್ರಾಂತ್ಯದಲ್ಲಿ ನಡೆದ ವಾಯುದಾಳಿಯಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪಕ್ತಿಕಾ ಪ್ರಾಂತ್ಯದ ಬರ್ಮಲ್ ಜಿಲ್ಲೆಯ ರಖಾ ಮತ್ತು ತೋರ್ಕಂಡಿ ಪ್ರದೇಶಗಳಲ್ಲೂ ದಾಳಿ ನಡೆದಿದ್ದು, ಖಾಲಿ ಮನೆ ಹಾಗೂ ಅಂಗಡಿಯೊಂದು ಹಾನಿಗೊಳಗಾಗಿದೆ. ಇಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳು ಅಫ್ಘಾನಿಸ್ತಾನದ ನೆಲವನ್ನು ತರಬೇತಿ ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಬಳಸಿಕೊಳ್ಳುತ್ತಿವೆ ಎಂದು ಪಾಕಿಸ್ತಾನ ಆರೋಪಿಸಿದೆ. ಪಾಕಿಸ್ತಾನದ ಭದ್ರತೆಗೆ ಎದುರಾಗಿರುವ ಬೆದರಿಕೆಯನ್ನು ಎದುರಿಸಲು ಈ ರೀತಿಯ ಕ್ರಮ ಅಗತ್ಯವಾಗಿದೆ ಎಂದು ಪಾಕ್ ಸೇನೆ ಸಮರ್ಥಿಸಿಕೊಂಡಿದೆ.
ಪಾಕಿಸ್ತಾನದ ಆರೋಪಗಳನ್ನು ತಾಲಿಬಾನ್ ಆಡಳಿತ ತಳ್ಳಿಹಾಕಿದೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಅಫ್ಘಾನಿಸ್ತಾನದ ಗಡಿ ಮತ್ತು ಸಾರ್ವಭೌಮತ್ವ ಉಲ್ಲಂಘನೆಯಾದರೆ ಆತ್ಮರಕ್ಷಣೆಯ ಹಕ್ಕನ್ನು ಬಳಸಿಕೊಂಡು ಪ್ರತಿಕ್ರಿಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿಶ್ವಸಂಸ್ಥೆಯ ಚಾರ್ಟರ್ನ ಆರ್ಟಿಕಲ್ 51ರ ಆತ್ಮರಕ್ಷಣೆಯ ಹಕ್ಕನ್ನು ಉಲ್ಲೇಖಿಸಿರುವ ತಾಲಿಬಾನ್, ಪಾಕಿಸ್ತಾನದ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ. ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ಸಹಾಯ ಮಿಷನ್ ಪ್ರಕಾರ, ಗಡಿಯಾಚೆಗಿನ ಪಾಕಿಸ್ತಾನ ಸೇನೆಯ ದಾಳಿಗಳಿಂದ ನಾಗರಿಕರೂ ಸಾವನ್ನಪ್ಪುತ್ತಿದ್ದಾರೆ. 2026ರ ಏಪ್ರಿಲ್ನಿಂದ ಜೂನ್ವರೆಗೆ ಮೂರು ತಿಂಗಳ ಅವಧಿಯಲ್ಲಿ ಪಾಕ್ ಪಡೆಗಳ ದಾಳಿಗಳಿಂದ 57 ಮಂದಿ ಮೃತಪಟ್ಟಿದ್ದು, 352 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದಾರೆ.
ಪಾಕಿಸ್ತಾನ–ಅಫ್ಘಾನಿಸ್ತಾನ ನಡುವಿನ ಗಡಿ ವಿವಾದವೂ ಉಭಯ ದೇಶಗಳ ನಡುವಿನ ಉದ್ವಿಗ್ನತೆಗೆ ಪ್ರಮುಖ ಕಾರಣವಾಗಿದೆ. ಬ್ರಿಟಿಷರ ಕಾಲದಲ್ಲಿ ಗುರುತಿಸಲಾದ ಸುಮಾರು 2,640 ಕಿ.ಮೀ. ಉದ್ದದ ಡುರಾಂಡ್ ಲೈನ್ ಗಡಿಯನ್ನು ಅಫ್ಘಾನಿಸ್ತಾನವು ಅಧಿಕೃತ ಅಂತಾರಾಷ್ಟ್ರೀಯ ಗಡಿಯಾಗಿ ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಪಾಕಿಸ್ತಾನ ಗಡಿಯಲ್ಲಿ ತಂತಿಬೇಲಿ ನಿರ್ಮಿಸಲು ಆರಂಭಿಸಿದ ಬಳಿಕವೂ ಎರಡೂ ದೇಶಗಳ ನಡುವೆ ಹಲವು ಬಾರಿ ಸಶಸ್ತ್ರ ಘರ್ಷಣೆಗಳು ನಡೆದಿವೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನದಲ್ಲಿ ಟಿಟಿಪಿ ದಾಳಿಗಳು ಹೆಚ್ಚಾಗಿವೆ ಎಂಬುದು ಇಸ್ಲಾಮಾಬಾದ್ನ ಪ್ರಮುಖ ಆರೋಪವಾಗಿದೆ. ತಾಲಿಬಾನ್ ಆಡಳಿತ ಟಿಟಿಪಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆರೋಪಿಸುತ್ತಿದ್ದರೆ, ತನ್ನ ಆಂತರಿಕ ಭದ್ರತಾ ವೈಫಲ್ಯವನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ ಎಂದು ತಾಲಿಬಾನ್ ಹೇಳುತ್ತಿದೆ.
ಕುನಾರ್, ಪಕ್ತಿಕಾ ಮತ್ತು ಪಕ್ತ್ಯಾ ಸೇರಿದಂತೆ ಗಡಿ ಪ್ರಾಂತ್ಯಗಳಲ್ಲಿ ನಿರಂತರ ಶೆಲ್ ದಾಳಿ ಮತ್ತು ವೈಮಾನಿಕ ದಾಳಿಗಳಿಂದಾಗಿ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಸಾವಿರಾರು ಕುಟುಂಬಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿರುವುದರಿಂದ ಗಡಿ ಪ್ರದೇಶಗಳಲ್ಲಿ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.