ಮಾಸ್ಕೋ, ಸೆ.20 (DaijiworldNews/AA): ಉಕ್ರೇನಿಯನ್ ಪಡೆಗಳು ರಷ್ಯಾದ ಮೇಲೆ ಏಕಕಾಲದಲ್ಲಿ 1,000ಕ್ಕೂ ಹೆಚ್ಚು ಡ್ರೋನ್ಗಳನ್ನು ಹಾರಿಸಿ ದಾಳಿ ನಡೆಸಿವೆ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬೃಹತ್ ದಾಳಿಯಲ್ಲಿ ನೂರಾರು ಡ್ರೋನ್ಗಳು ನೇರವಾಗಿ ರಷ್ಯಾದ ರಾಜಧಾನಿ ಮೊಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು. ಇದು ಮಾಸ್ಕೋ ನಗರದ ಮೇಲೆ ಇದುವರೆಗೆ ನಡೆದ ಅತಿ ದೊಡ್ಡ ಡ್ರೋನ್ ದಾಳಿಯಾಗಿದೆ. ದಾಳಿಯಿಂದಾಗಿ ತೈಲ ಶುದ್ಧೀಕರಣ ಘಟಕ ಹಾಗೂ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದೆ ಎಂದು ಮಾಸ್ಕೋದ ಮೇಯರ್ ಸೆರ್ಗೆಯ್ ಸೊಬ್ಯಾನಿನ್ ಮಾಹಿತಿ ನೀಡಿದ್ದಾರೆ.
ಡ್ರೋನ್ ದಾಳಿಯಿಂದ 74 ವರ್ಷದ ವೃದ್ಧ ಹಾಗೂ 44 ವರ್ಷದ ಮಹಿಳೆ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದು, 20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮಾಸ್ಕೋ ಪ್ರಾಂತ್ಯದ ಗವರ್ನರ್ ಆಂಡ್ರೇ ವೊರೊಬ್ಯೋವ್ ಹೇಳಿದ್ದಾರೆ. ಮೇಯರ್ ಸೊಬ್ಯಾನಿನ್ ಪ್ರಕಾರ, ಮೊಸ್ಕೋ ನಗರದತ್ತ ಧಾವಿಸುತ್ತಿದ್ದ 450 ಡ್ರೋನ್ಗಳನ್ನು ಆಕಾಶದಲ್ಲೇ ಧ್ವಂಸಗೊಳಿಸಲಾಗಿದೆ.
ತಮ್ಮ ವಾಯು ರಕ್ಷಣಾ ಪಡೆಗಳು ರಷ್ಯಾದ ಭೂಭಾಗ, ಅಕ್ರಮವಾಗಿ ವಶಪಡಿಸಿಕೊಂಡ ಕ್ರೈಮಿಯಾ ಪರ್ಯಾಯ ದ್ವೀಪ ಹಾಗೂ ಕಪ್ಪು ಸಮುದ್ರದ ಮೇಲೆ ಒಟ್ಟು 1,000 ಉಕ್ರೇನಿಯನ್ ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ರಷ್ಯಾದ ಸಂಸತ್ ಚುನಾವಣೆಯನ್ನು ಬುಡಮೇಲು ಮಾಡುವ ಉದ್ದೇಶದಿಂದ ಉಕ್ರೇನ್ ಈ ದಾಳಿ ನಡೆಸಿದೆ. ಆದರೆ ಈ ಯತ್ನ ವಿಫಲವಾಗಿದೆ ಎಂದು ರಷ್ಯಾ ಅಭಿಪ್ರಾಯಪಟ್ಟಿದೆ.