ಕ್ಯಾಲಿಫೋರ್ನಿಯಾ, ಸೆ.20 (DaijiworldNews/TA): ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಕೆಲವೇ ವರ್ಷಗಳಲ್ಲಿ ಮನುಕುಲವೇ ಅಳಿದುಹೋಗಬಹುದು ಎಂಬ ಭೀತಿಯನ್ನು ಎನ್ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ತಳ್ಳಿಹಾಕಿದ್ದಾರೆ. 2030ರೊಳಗೆ ಎಐ ತಂತ್ರಜ್ಞಾನದಿಂದ ಜಗತ್ತು ನಾಶವಾಗುವ ಸಾಧ್ಯತೆ ಶೂನ್ಯಕ್ಕೆ ಸಮಾನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಿಬಿಎಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಐ ಚಿಪ್ ತಯಾರಿಕಾ ಕಂಪನಿ ಎನ್ವಿಡಿಯಾದ ಸಿಇಒ ಜೆನ್ಸೆನ್ ಹುವಾಂಗ್, ಎಐನಿಂದ ಜಗತ್ತು ವಿನಾಶವಾಗಲಿದೆ ಎಂಬ ಆತಂಕಗಳಿಗೆ ತಾಂತ್ರಿಕ ಆಧಾರವಿಲ್ಲ ಎಂದು ಹೇಳಿದ್ದಾರೆ. ಎಐ ಕುರಿತು ಭೀತಿ ವ್ಯಕ್ತಪಡಿಸುವ ಕೆಲವರು ರಾಜಕೀಯ ಉದ್ದೇಶದಿಂದ ಅಥವಾ ಜನರ ಗಮನ ಸೆಳೆಯುವ ಸಲುವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರಬಹುದು ಎಂದು ಹುವಾಂಗ್ ಹೇಳಿದ್ದಾರೆ. ಇಂತಹ ಹೇಳಿಕೆಗಳಿಗೆ ಯಾವುದೇ ತಂತ್ರಜ್ಞಾನ ಆಧಾರವಿಲ್ಲ ಎಂದು ಅವರು ತಿಳಿಸಿದ್ದಾರೆ.
ಎಐ ತಂತ್ರಜ್ಞಾನ ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿದ್ದು, ಅದರ ಬೆಳವಣಿಗೆಯನ್ನು ನಿಯಂತ್ರಿಸುವ ಅಥವಾ ನಿಧಾನಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಆದರೆ, ಹುವಾಂಗ್ ಇದಕ್ಕೆ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಕಾನೂನು ನಿರ್ಬಂಧಗಳ ಮೂಲಕ ಎಐ ಅಭಿವೃದ್ಧಿಯ ವೇಗವನ್ನು ನಿಧಾನಗೊಳಿಸುವ ಬದಲು, ಎಐ ಆವಿಷ್ಕಾರಗಳ ವೇಗವನ್ನು ಮುಂದುವರಿಸಬೇಕು ಎಂದು ಅವರು ಹೇಳಿದ್ದಾರೆ.
ತಂತ್ರಜ್ಞಾನ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಆಂತರಿಕ ಗುಣಮಟ್ಟ ಮತ್ತು ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸುತ್ತಲೇ ವೇಗವಾಗಿ ಮುಂದುವರಿಯಬೇಕು. ಆರ್ಥಿಕ ಬೆಳವಣಿಗೆ ಹಾಗೂ ಜಾಗತಿಕ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಐ ಆವಿಷ್ಕಾರಗಳು ವೇಗವಾಗಿ ಸಾಗಬೇಕು ಎಂದು ಹುವಾಂಗ್ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ತಂತ್ರಜ್ಞಾನವನ್ನು ಶೀಘ್ರವಾಗಿ ಮಾರುಕಟ್ಟೆಗೆ ತರುವ ಆತುರದಲ್ಲಿ ಸುರಕ್ಷತೆಯನ್ನು ಕಡೆಗಣಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಯಾವುದೇ ಜವಾಬ್ದಾರಿಯುತ ತಂತ್ರಜ್ಞಾನ ಕಂಪನಿಯು ಉತ್ಪನ್ನ ಬಿಡುಗಡೆಗೂ ಮುನ್ನ ಅದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಸುರಕ್ಷತೆ ಮತ್ತು ಆವಿಷ್ಕಾರದ ವೇಗ ಪರಸ್ಪರ ಪೂರಕವಾಗಿರಬೇಕು ಎಂದು ಜೆನ್ಸೆನ್ ಹುವಾಂಗ್ ಹೇಳಿದ್ದಾರೆ.