ರಿಯಾದ್, ಸೆ.20 (DaijiworldNews/TA): ಯೆಮೆನ್ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಹಾಗೂ ಯಾನ್ಬುವಿನಲ್ಲಿರುವ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ದಾಳಿಯ ಬೆನ್ನಲ್ಲೇ ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದಟ್ಟ ಕಪ್ಪು ಹೊಗೆ ಕಾಣಿಸಿಕೊಂಡಿದ್ದು, ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹೌತಿಗಳ ಹೇಳಿಕೆಯ ಪ್ರಕಾರ, ರಿಯಾದ್ನಲ್ಲಿರುವ ‘ಸೂಕ್ಷ್ಮ ಗುರಿಗಳು’ ಹಾಗೂ ಕೆಂಪು ಸಮುದ್ರದ ತೀರದಲ್ಲಿರುವ ಯಾನ್ಬು ನಗರದ ಸೌದಿ ಅರಾಮ್ಕೊ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳು ಹಾಗೂ ಡ್ರೋನ್ಗಳನ್ನು ಬಳಸಿರುವುದಾಗಿ ಹೌತಿ ಸೇನಾ ವಕ್ತಾರ ಯಾಹ್ಯಾ ಸರೀ ತಿಳಿಸಿದ್ದಾರೆ. ಇದರ ನಡುವೆ, ಸೌದಿ ನೇತೃತ್ವದ ಒಕ್ಕೂಟವು ರಿಯಾದ್ ಕಡೆಗೆ ಉಡಾಯಿಸಲಾಗಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ವಾಯು ರಕ್ಷಣಾ ವ್ಯವಸ್ಥೆ ತಡೆದು ನಾಶಪಡಿಸಿದೆ ಎಂದು ತಿಳಿಸಿದೆ. ಬಿಷಾ, ತಾಯಿಫ್, ಫರಸಾನ್ ಮತ್ತು ಯಾನ್ಬು ಪ್ರದೇಶಗಳ ಮೇಲಿನ ಇತರ ದಾಳಿಯ ಪ್ರಯತ್ನಗಳನ್ನೂ ತಡೆಯಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.
ದಾಳಿಗೂ ಮುನ್ನ ರಿಯಾದ್ ಸೇರಿದಂತೆ ಸೌದಿಯ ಹಲವು ಪ್ರದೇಶಗಳಲ್ಲಿ ‘ವೈಮಾನಿಕ ಬೆದರಿಕೆ’ ಕುರಿತು ತುರ್ತು ಎಚ್ಚರಿಕೆಗಳನ್ನು ನೀಡಲಾಗಿತ್ತು. ಇತ್ತೀಚಿನ ಉದ್ವಿಗ್ನತೆ ಆರಂಭವಾದ ಬಳಿಕ ರಿಯಾದ್ನಲ್ಲಿ ಇಂತಹ ಎಚ್ಚರಿಕೆ ನೀಡಿರುವುದು ಮೊದಲ ಬಾರಿಗೆ ಎಂದು ವರದಿಯಾಗಿದೆ. ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇಂಧನ ಸಂಗ್ರಹಣಾ ಪ್ರದೇಶದ ಬಳಿ ಬೆಂಕಿ ಮತ್ತು ದಟ್ಟ ಹೊಗೆ ಕಾಣಿಸಿಕೊಂಡಿದೆ. ಘಟನೆಯಿಂದ ಕೆಲವು ವಿಮಾನಗಳ ಸಂಚಾರದಲ್ಲಿ ವಿಳಂಬ ಉಂಟಾದ ವರದಿಗಳೂ ಬಂದಿವೆ. ಆದರೆ ಸೌದಿ ಅಧಿಕಾರಿಗಳ ಪ್ರಕಾರ, ದಾಳಿಯಿಂದ ಯಾವುದೇ ಸಾವು-ನೋವು ಅಥವಾ ಗಮನಾರ್ಹ ಹಾನಿ ಸಂಭವಿಸಿರುವ ಬಗ್ಗೆ ತಕ್ಷಣದ ಮಾಹಿತಿ ಇಲ್ಲ. ಹೌತಿಗಳು ಈ ದಾಳಿಯನ್ನು ಯೆಮೆನ್ ರಾಜಧಾನಿ ಸನಾದಲ್ಲಿ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ನಡೆಸಿರುವುದಾಗಿ ಹೇಳಿದ್ದಾರೆ. ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಿಯಾದ್ ಮೇಲೆ ನಡೆದ ಈ ದಾಳಿ ಪ್ರಾದೇಶಿಕ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.