ವಾಷಿಂಗ್ಟನ್, ಸೆ.19 (DaijiworldNews/AA): ರಷ್ಯಾದಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಖರೀದಿ ಮಾಡುವ ಭಾರತ ಹಾಗೂ ಚೀನಾ ಸೇರಿದಂತೆ ಪ್ರಮುಖ ದೇಶಗಳ ಮೇಲೆ ಶೇ. 100 ರಷ್ಟು ಆಮದು ಸುಂಕ ವಿಧಿಸುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.

ಯುಎಸ್ ಸೆನೆಟರ್ ಲಿಂಡ್ಸೆ ಗ್ರಾಹಮ್ ಅವರ ನೆನಪಿನಲ್ಲಿ ಇದಕ್ಕೆ ಲಿಂಡ್ಸೆ ಒ. ಗ್ರಾಹಮ್ ಸ್ಯಾಂಕ್ಷನಿಂಗ್ ರಷ್ಯಾ ಆಂಡ್ ಇರಾನ್ ಆಕ್ಟ್ 2026 ಎಂದು ಹೆಸರಿಡಲಾಗಿದೆ. ಈಗಾಗಲೇ ಈ ಮಸೂದೆಯು ಅಮೆರಿಕದ ಸೆನೆಟ್ನಲ್ಲಿ ಭಾರಿ ಬಹುಮತದೊಂದಿಗೆ ಅಂಗೀಕಾರ ಪಡೆದಿತ್ತು.
ಭಾರತ, ಚೀನಾ, ಯುಎಇ, ಟರ್ಕಿ, ಸಿಂಗಾಪುರ, ಅಜರ್ಬೈಜಾನ್, ಕಜಕಿಸ್ತಾನ್, ಹಂಗೇರಿ, ಕಿರ್ಗಿಸ್ತಾನ್ ಮತ್ತು ಸ್ಲೊವಾಕಿಯಾ ಸೇರಿ ಒಟ್ಟು 10 ರಾಷ್ಟ್ರಗಳನ್ನು ನೇರವಾಗಿ ಹೆಸರಿಸಲಾಗಿದೆ. ಈ ದೇಶಗಳು ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುತ್ತಿರುವುದರಿಂದ ಇವುಗಳ ಮೇಲೆ ಶೇ.100ರಷ್ಟು ದ್ವಿತೀಯ ಶ್ರೇಣಿಯ ಸುಂಕ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಡೆಮಾಕ್ರಟಿಕ್ ಸಂಸದ ಸ್ಟೆನಿ ಹೋಯರ್ ತಿದ್ದುಪಡಿ ಮಂಡಿಸಿದ್ದಾರೆ.
ಮಸೂದೆಯಲ್ಲಿನ ಅಂಶಗಳು-
* ರಷ್ಯಾದ ನಾಯಕತ್ವ ಹಾಗೂ ಇಂಧನ ಕ್ಷೇತ್ರದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದು.
* ನಿರ್ಬಂಧಗಳನ್ನು ತಪ್ಪಿಸಿ ಕಚ್ಚಾತೈಲ ಪೂರೈಸುವ ರಷ್ಯಾದ 'ಶಾಡೋ ಫ್ಲೀಟ್' (ರಹಸ್ಯ ಹಡಗುಗಳ ಜಾಲ) ಹಡಗುಗಳನ್ನು ಗುರಿಯಾಗಿಸುವುದು.
* ರಷ್ಯಾದ ಮೇಲಿನ ಅವಲಂಬನೆ ತಗ್ಗಿಸಲು ಭಾರತ ಮತ್ತು ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವುದು.
* ಇರಾನ್ ಮೇಲೂ ಹೆಚ್ಚುವರಿ ಆರ್ಥಿಕ ನಿರ್ಬಂಧಗಳನ್ನು ಹೇರುವುದು.