ಕೋಹಾತ್, ಸೆ.18 (DaijiworldNews/AA): ಪ್ರಾರ್ಥನೆಯ ವೇಳೆ ಮಸೀದಿಯೊಂದರ ಸಮೀಪ ಸಂಭವಿಸಿದ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 15 ಜನರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಕೋಹಾತ್ನಲ್ಲಿ ಶುಕ್ರಾವರ ಸಂಭವಿಸಿದೆ.

ಮೃತಪಟ್ಟ 15 ಮಂದಿಯ ಪೈಕಿ ಐವರು ಸೈನಿಕರು ಕೂಡ ಸೇರಿದ್ದಾರೆ. ಘಟನೆಯ ಬೆನ್ನಲ್ಲೇ ಪೊಲೀಸ್ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಿದೆ.
ಜನರು ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಇಡೀ ಪ್ರದೇಶ ಕಂಪಿಸಿದಂತಾಗಿದೆ. ಮಸೀದಿ ಸೇರಿದಂತೆ ಹತ್ತಿರದ ಹಲವಾರು ಕಟ್ಟಡಗಳು ಹಾನಿಗೊಳಗಾದವು. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಅನುಮಾನ ವ್ಯಕ್ತವಾಗಿದೆ.
ಸ್ಫೋಟದ ನಿಖರ ಸ್ವರೂಪ ಮತ್ತು ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳದಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಕಾಗಿದೆ. ತನಿಖಾ ಸಂಸ್ಥೆಗಳು ಸ್ಫೋಟಕ್ಕೆ ಕಾರಣವಾದ ಅಂಶಗಳ ಕುರಿತು ಶೋಧ ಆರಂಭಿಸಿದ್ದು, ತನಿಖೆ ಮುಂದುವರಿದಿದೆ.