ವಾಷಿಗ್ಟನ್, ಸೆ.18 (DaijiworldNews/AK): ಅಮೆರಿಕದ ಮಿಚಿಗನ್ನಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಟೆಕ್ಸಾಸ್ ಏರ್ ನ್ಯಾಷನಲ್ ಗಾರ್ಡ್ಗೆ ಸೇರಿದ F-16 ಯುದ್ಧವಿಮಾನ ಪತನಗೊಂಡಿದೆ. ಅದೃಷ್ಟವಶಾತ್ ಪೈಲಟ್ಸಮಯಕ್ಕೆ ಸರಿಯಾಗಿ ಹೊರಕ್ಕೆ ಜಿಗಿದು (ಎಜೆಕ್ಟ್) ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

149ನೇ ಫೈಟರ್ ವಿಂಗ್ಗೆ ನಿಯೋಜಿಸಲಾಗಿದ್ದ ಎಫ್-16 ಫೈಟಿಂಗ್ ಫಾಲ್ಕನ್ ವಿಮಾನವು ಟ್ರಾವರ್ಸ್ ಸಿಟಿ ಸಮೀಪದ ಪ್ರದೇಶದಲ್ಲಿ ದೈನಂದಿನ ತರಬೇತಿ ವೇಳೆ ಪತನಗೊಂಡಿದೆ ಎಂದು ಘಟಕವು ತನ್ನ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದೆ.
ಇನ್ನೂ ಘಟನೆ ವೇಳೆ ಪೈಲಟ್ ವಿಮಾನದಿಂದ ಸುರಕ್ಷಿತವಾಗಿ ಹೊರಕ್ಕೆ ಜಿಗಿದಿದ್ದಾರೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಅವಘಡದಲ್ಲಿ ಪೈಲಟ್ಗೆ ಗಾಯಗಳಾಗಿರುವ ಸಾಧ್ಯತೆಯಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು 149ನೇ ಫೈಟರ್ ವಿಂಗ್ ಘಟಕ ತಿಳಿಸಿದೆ.
ಅಮೆರಿಕದ ಸೇನೆ 1979 ರಿಂದ F-16 ಯುದ್ಧವಿಮಾನಗಳನ್ನ ಕಾರ್ಯಾಚರಣೆಗೆ ಬಳಸುತ್ತಿದೆ. ಏರ್ ಫೋರ್ಸ್ ಸೇಫ್ಟಿ ಸೆಂಟರ್ ಮಾಹಿತಿಯ ಪ್ರಕಾರ, 2000ನೇ ಇಸವಿಯಿಂದ ಈವರೆಗೆ F-16 ವಿಮಾನಗಳಿಗೆ ಸಂಬಂಧಿಸಿದ ಕನಿಷ್ಠ 14 ʻClass A mishapʼ (ದೊಡ್ಡ ಪ್ರಮಾಣದಲ್ಲಿ ವಿಮಾನ ಪತನವಾದಾಗ) ದಾಖಲಾಗಿವೆ.