ಇಸ್ಲಾಮಾಬಾದ್, ಸೆ.18 (DaijiworldNews/AK): ಇಂಧನ ಹಾಗೂ ವಿದ್ಯುತ್ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಸರ್ಕಾರವು ವೆಚ್ಚ ಕಡಿತ ಮತ್ತು ಇಂಧನ ಉಳಿತಾಯಕ್ಕಾಗಿ ಕಠಿಣ ಮಿತವ್ಯಯ ಕ್ರಮಗಳನ್ನು ಜಾರಿಗೆ ತಂದಿದೆ.

ಸರ್ಕಾರಿ ವಾಹನಗಳ ಇಂಧನ ಕಡಿತ, ಹೊಸ ವಾಹನ ಖರೀದಿ ನಿಷೇಧ, ಅಧಿಕಾರಿಗಳ ವಿದೇಶ ಪ್ರವಾಸ ರದ್ದು ಹಾಗೂ ಅಧಿಕೃತ ಭೋಜನಕೂಟಗಳ ಮೇಲಿನ ನಿರ್ಬಂಧಗಳು ಇದರಲ್ಲಿ ಸೇರಿವೆ. ಸರ್ಕಾರಿ ವಾಹನಗಳಿಗೆ ನೀಡಲಾಗುತ್ತಿದ್ದ ಇಂಧನ ಕೋಟಾವನ್ನು ಮುಂದಿನ ಮೂರು ತಿಂಗಳ ಕಾಲ ಶೇ. 50ರಷ್ಟು ಕಡಿತಗೊಳಿಸಲಾಗಿದೆ.
ವಿದೇಶಿ ವಿದ್ಯಾರ್ಥಿವೇತನಗಳನ್ನು ಹೊರತುಪಡಿಸಿ, ಅಧಿಕಾರಿಗಳ ಎಲ್ಲಾ ರೀತಿಯ ವಿದೇಶ ಭೇಟಿ ಹಾಗೂ ಪ್ರವಾಸಗಳನ್ನು (ಕಡ್ಡಾಯ ಪ್ರವಾಸಗಳನ್ನೂ ಒಳಗೊಂಡು) ಮುಂದಿನ ಮೂರು ತಿಂಗಳ ಅವಧಿಗೆ ನಿರ್ಬಂಧಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಉಪಕರಣಗಳನ್ನು ಹೊರತುಪಡಿಸಿ ಉಳಿದ ಯಾವುದೇ ಬಾಳಿಕೆ ಬರುವ ವಸ್ತುಗಳ ಖರೀದಿಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ನೌಕರೇತರ ಸಂಬಂಧಿತ ವೆಚ್ಚಗಳ ಬಜೆಟ್ನಲ್ಲಿ ಇಡೀ 2026-27ರ ಹಣಕಾಸು ವರ್ಷಕ್ಕೆ ಶೇ. 5ರಷ್ಟು ಕಡಿತ ಘೋಷಿಸಲಾಗಿದೆ. ದೇಶಾದ್ಯಂತ ನಡೆಯುವ ಎಲ್ಲಾ ವಿವಾಹ ಸಂಬಂಧಿತ ಸಮಾರಂಭ ಹಾಗೂ ಸಭೆಗಳಲ್ಲಿ ಅತಿಥಿಗಳಿಗೆ ಕೇವಲ ಒಂದೇ ತಿನಿಸನ್ನು ಮಾತ್ರ ಬಡಿಸಬೇಕೆಂದು ಆದೇಶಿಸಲಾಗಿದೆ.
ಇಂಧನ ಮತ್ತು ಪ್ರಯಾಣ ವೆಚ್ಚವನ್ನು ತಗ್ಗಿಸಲು ಅಧಿಕಾರಿಗಳು ಸಭೆಗಳಿಗೆ ವರ್ಚುವಲ್ (ವಿಡಿಯೋ ಕಾನ್ಫರೆನ್ಸಿಂಗ್) ಮಾಧ್ಯಮವನ್ನು ಬಳಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಎಲ್ಲಾ ಅಂಗಡಿಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್ಗಳು ಮತ್ತು ದಿನಸಿ ಅಂಗಡಿಗಳು ಕಡ್ಡಾಯವಾಗಿ ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಕಲ್ಯಾಣ ಮಂಟಪಗಳು ಮತ್ತು ಹಬ್ಬದ ಕಾರ್ಯಕ್ರಮ ನಡೆಸುವ ಸ್ಥಳಗಳನ್ನು ರಾತ್ರಿ 10 ಗಂಟೆಯೊಳಗೆ ಮುಚ್ಚಲು ಸೂಚಿಸಲಾಗಿದೆ. ಹೋಟೆಲ್ಗಳು ಮತ್ತು ಕೆಫೆಗಳು ರಾತ್ರಿ 11 ರವರೆಗೆ ತೆರೆಯಲು ಅವಕಾಶವಿದ್ದು, ಹೋಮ್ ಡೆಲಿವರಿ ಮತ್ತು ಟೇಕ್ಅವೇ ಸೇವೆಗಳಿಗೆ ಯಾವುದೇ ಸಮಯದ ನಿರ್ಬಂಧವಿಲ್ಲ.