ಮಾಸ್ಕೋ, ಆ. 10 (DaijiworldNews/AK): ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಮಗು ಸೇರಿ 13 ಮಂದಿ ಸಾವನ್ನಪ್ಪಿದ್ದಾರೆ. 75 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಮಧ್ಯ ರಷ್ಯಾದ ಪ್ರದೇಶವಾದ ಟಾಟರ್ಸ್ತಾನ್ ಮೇಲೆ ಈ ದಾಳಿ ನಡೆದಿದೆ. ನಾಲ್ಕು ವರ್ಷಗಳ ಹಿಂದೆ ಯುದ್ಧ ಪ್ರಾರಂಭವಾದಾಗಿನಿಂದ ಉಕ್ರೇನ್ ನಡೆಸಿದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ.
ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮುಗಿಲೆತ್ತರಕ್ಕೆ ದಟ್ಟವಾಗಿ ಹೊಗೆ ಏಳುವುದು ಸೆರೆಯಾಗಿದೆ.
ದಾಳಿಯ ಬಗ್ಗೆ ಉಕ್ರೇನ್ ಪ್ರತಿಕ್ರಿಯಿಸಿದ್ದು, ತನ್ನ ಗಡಿಯಿಂದ 1,000 ಕಿಲೋಮೀಟರ್ (620 ಮೈಲುಗಳು) ಕ್ಕಿಂತ ಹೆಚ್ಚು ದೂರದಲ್ಲಿರುವ ಕೈಗಾರಿಕಾ ನಗರ ನಿಜ್ನೆಕಾಮ್ಸ್ಕ್ ನಲ್ಲಿರುವ ತೈಲ ಸಂಸ್ಕರಣಾಗಾರದ ಮೇಲೆ ಡ್ರೋನ್ ದಾಳಿ ನಡೆದಿದೆ. ರಷ್ಯಾದ ಮಿಲಿಟರಿ ಸಾಮರ್ಥ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ತೈಲ ಘಟಕಗಳನ್ನು ನಿಯಂತ್ರಿಸುವ ಟನೆಕೊ ಸಂಸ್ಕರಣಾಗಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಉಕ್ರೇನ್ನ ಜನರಲ್ ಸ್ಟಾಫ್ ಹೇಳಿದೆ ಎಂದು ವರದಿಯಾಗಿದೆ.