ವಾಷಿಂಗ್ಟನ್, ಆ. 10 (DaijiworldNews/AA): ಅಮೆರಿಕದ ಅರಿಝೋನಾದಲ್ಲಿ ತನ್ನ ಪ್ರಿಯತಮೆಯನ್ನು ಕೊಲೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಭಾರತೀಯ ಮೂಲದ ಯುವಕನನ್ನು ಪೊಲೀಸರು ಜರ್ಮನಿಯಲ್ಲಿ ಬಂಧಿಸಿದ್ದಾರೆ.

ಟಕ್ಸನ್ನಲ್ಲಿರುವ ಅರಿಝೋನಾ ವಿಶ್ವವಿದ್ಯಾಲಯದ ಸಮೀಪದ ಅಪಾರ್ಟ್ಮೆಂಟ್ನಲ್ಲಿ ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ ಶವವಾಗಿ ಪತ್ತೆಯಾಗಿದ್ದರು. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆಕೆಯ ಪ್ರಿಯಕರ ಭಾರತೀಯ ಮೂಲದ ವರುಣ್ ಬಚ್ಚಿಗಾರಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿತ್ತು. ಘಟನೆ ಬಳಿಕ ಪರಾರಿಯಾಗಿದ್ದ ಆತನನ್ನು ಇದೀಗ ಬಂಧಿಸಲಾಗಿದೆ.
ಗೆಳತಿಯನ್ನು ಹತ್ಯೆಗೈದು ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಯುವತಿಯ ಮೊಬೈಲ್ ಹಾಗೂ ಕ್ರೆಡಿಟ್ ಕಾರ್ಡ್ಗಳನ್ನು ಕಳವು ಮಾಡಿದ್ದ. ಅಲ್ಲದೇ ಅವರ ತಾಯಿಗೆ ನಿರಂತರ ಮಸೇಜ್ಗಳನ್ನು ಕಳುಹಿಸಿದ್ದ. ತನಿಖೆ ನಡೆಸಿದ ಪೊಲೀಸರು, ಆರೋಪಿಯು ಟಕ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೂಸ್ಟನ್ಗೆ ವಿಮಾನ ಹತ್ತಿ, ಅಲ್ಲಿಂದ ಬರ್ಲಿನ್ಗೆ ತೆರಳುವ ಮತ್ತೊಂದು ವಿಮಾನದ ಮೂಲಕ ಪರಾರಿಯಾಗಿದ್ದಾಗಿ ಪತ್ತೆ ಹಚ್ಚಿದ್ದಾರೆ. ವರದಿಗಳ ಪ್ರಕಾರ, ಆರೋಪಿ ಭಾರತಕ್ಕೆ ಪರಾರಿಯಾಗಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಸಲಾಜರ್ ಮೇಲೆ ವರುಣ್ ಹಲ್ಲೆ ನಡೆಸುತ್ತಿದ್ದ. ಹೀಗಾಗಿ ಅವಳು ಆತನೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಇದೇ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಅಲ್ಲದೇ ಕೊಲೆಗೂ ಮುನ್ನ ಆಕೆಯ ಕೊಠಡಿಯಿಂದ ಜೋರಾಗಿ ಕಿರುಚಾಡುವ ಶಬ್ದ ಕೇಳಿಸುತ್ತಿತ್ತು. ಆಗ ಕೇಳಿದಾಗ, ಚೆನ್ನಾಗಿರುವುದಾಗಿ ಸಲಾಜರ್ ತಿಳಿಸಿದ್ದಳು ಎಂದು ಮೃತಳ ರೂಮ್ಮೇಟ್ಗಳು ಹೇಳಿದ್ದಾರೆ.
ಆರೋಪಿ ವರುಣ್ ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ವಿದ್ಯಾರ್ಥಿಯಾಗಿದ್ದನು. ಆದರೆ, ಗಲಾಟೆಯೊಂದರ ಹಿನ್ನೆಲೆಯಲ್ಲಿ ಆತನನ್ನು ಕಾಲೇಜಿನಿಂದ ಹೊರಹಾಕಲಾಗಿತ್ತು. ಇನ್ನು ಈ ಹಿಂದೆ ಈತನ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪಗಳಿದ್ದವು ಎಂದು ಹೇಳಲಾಗಿದೆ.