ಅಮೆರಿಕಾ, ಆ. 09 (DaijiworldNews/TA): ಉತ್ತರ ಅಮೆರಿಕದ ಬಂಟರ ಸಂಘ ಆಯೋಜಿಸಿದ್ದ ‘ದಿಬ್ಬಣ–2026’ 25ನೇ ರಜತ ಮಹೋತ್ಸವ ಮಹಾಸಮ್ಮೇಳನ ಜುಲೈ 30ರಿಂದ ಆಗಸ್ಟ್ 2ರವರೆಗೆ ವಾಷಿಂಗ್ಟನ್ ನ Bellevue ನಗರದ ಹಯಾತ್ ರೀಜೆನ್ಸಿಯಲ್ಲಿ ಯಶಸ್ವಿಯಾಗಿ ನೆರವೇರಿತು.






ಉತ್ತರ ಅಮೆರಿಕದ ಬಂಟರ ಸಂಘದ 25ನೇ ಅಧ್ಯಕ್ಷ ಗುಳ್ಳಾಡಿ ಮಂಜುನಾಥ್ ಆರ್. ಶೆಟ್ಟಿ ಅವರ ಸಮರ್ಥ ನಾಯಕತ್ವ, ದೂರದೃಷ್ಟಿಯ ಯೋಜನೆ, ಕಾರ್ಯಕಾರಿ ಸಮಿತಿ, ಸಂಘಟನಾ ಸಮಿತಿ ಹಾಗೂ ನೂರಾರು ಸ್ವಯಂಸೇವಕರ ಸಮರ್ಪಿತ ಸೇವೆಯಿಂದ ಆಯೋಜಿಸಲಾದ ಈ ಐತಿಹಾಸಿಕ ಮಹಾಸಮ್ಮೇಳನವು ಸಂಘದ 47 ವರ್ಷಗಳ ಸಾರ್ಥಕ ಪಯಣದ ಹೆಮ್ಮೆಯ ಮೈಲಿಗಲ್ಲಾಗಿ ಮೂಡಿಬಂತು. ಅಮೆರಿಕಾ, ಕೆನಡಾ, ಭಾರತ, ಆಸ್ಟ್ರೇಲಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ದುಬೈ),ಇಂಡೋನೇಷ್ಯಾ, ಕಾಂಬೋಡಿಯಾ ಹಾಗೂ ಓಮನ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ 600ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಅತಿಥಿಗಳು, ಮಹಾಸಮ್ಮೇಳನದಲ್ಲಿ ಭಾಗವಹಿಸಿದರು. ದೂರದೃಷ್ಟಿಯ ನಾಯಕತ್ವಕ್ಕಾಗಿ ಮುಲ್ಕಿ ಸುಂದರ್ ರಾಮ ಶೆಟ್ಟಿ ಅವರಿಗೆ ಮರಣೋತ್ತರವಾಗಿ ‘ಬಂಟ್ಸ್ ಸರ್ಕಲ್ ಆಫ್ ಹಾನರ್’ ಪ್ರಶಸ್ತಿ ಪ್ರದಾನಿಸಲಾಯಿತು.
ಈ ಪ್ರಶಸ್ತಿಯನ್ನು ಅವರ ಕಿರಿಯ ಪುತ್ರಿ ಊರ್ಮಿಳಾ ಶೆಟ್ಟಿ ಅವರು ಸ್ವೀಕರಿಸಿದರು. ಸಮಾವೇಶದಲ್ಲಿ ಹೆರಂಬ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ, ಯುಎಇ ಯ ಫಾರ್ಚೂನ್ ಗ್ರೂಪ್ ಹೋಟೆಲ್ಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮತ್ತು ಯುಎಇ ಬಂಟ್ಸ್ ಅಧ್ಯಕ್ಷ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.