ವಾಷಿಂಗ್ಟನ್, ಆ. 09 (DaijiworldNews/TA): ಅಮೇರಿಕಾದ ಚಿಕಾಗೋದಲ್ಲಿರುವ ಫ್ಯೂನರಲ್ ಹೋಂವೊಂದರಲ್ಲಿ 56 ಶವಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದೆ, ವಿವಿಧ ಹಂತಗಳಲ್ಲಿ ಕೊಳೆಯುವ ಸ್ಥಿತಿಯಲ್ಲಿ ಇರಿಸಲಾಗಿದ್ದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣದಿಂದ ಸ್ಥಳೀಯ ಅಧಿಕಾರಿಗಳು, ಪೊಲೀಸರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಘಟನೆ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಕುಕ್ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿ ಸ್ಥಳಕ್ಕೆ ತನಿಖಾ ತಂಡವನ್ನು ಕಳುಹಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಹಲವು ಶವಗಳನ್ನು ಶೈತ್ಯೀಕರಣ ವ್ಯವಸ್ಥೆಯಿಲ್ಲದೆ ಇರಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಇದರಿಂದ ಶವಗಳು ವೇಗವಾಗಿ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನಲಾಗಿದೆ. ಕೆಲವು ಶವಗಳ ಮೇಲೆ ಹುಳುಗಳು ಕಂಡುಬಂದಿದ್ದು, ಇನ್ನು ಕೆಲವು ಶವಗಳನ್ನು ಗುರುತಿಸುವುದೇ ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶವಗಳ ಗುರುತು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲು ಹಲವು ದಿನಗಳು ಬೇಕಾಗಬಹುದು. ಬಳಿಕ ಕುಟುಂಬ ಸದಸ್ಯರಿಗೆ ಅಗತ್ಯ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಫ್ಯೂನರಲ್ ಹೋಂನಿಂದ ಹೊರಹೊಮ್ಮುತ್ತಿದ್ದ ತೀವ್ರ ದುರ್ವಾಸನೆ ಕುರಿತು ಸ್ಥಳೀಯ ನಿವಾಸಿಗಳು ಹಲವು ತಿಂಗಳುಗಳಿಂದ ದೂರು ನೀಡುತ್ತಿದ್ದರು ಎನ್ನಲಾಗಿದೆ. ದುರ್ವಾಸನೆಯ ತೀವ್ರತೆ ಎಷ್ಟಿತ್ತೆಂದರೆ, ಸುತ್ತಮುತ್ತ ವಾಸಿಸುವುದೇ ಕಷ್ಟವಾಗಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ. ಆದರೆ ದೂರುಗಳ ನಡುವೆಯೂ ಸೂಕ್ತ ಕ್ರಮ ಕೈಗೊಳ್ಳಲು ವಿಳಂಬವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಘಟನೆ ಬೆಳಕಿಗೆ ಬಂದ ಬಳಿಕ ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಗಾಗಿ ಈ ಫ್ಯೂನರಲ್ ಹೋಂಗೆ ಬಂದಿದ್ದವರಲ್ಲಿ ಆಕ್ರೋಶ ಮತ್ತು ಆತಂಕ ವ್ಯಕ್ತವಾಗಿದೆ. ಲತಾಶಾ ಜಾನ್ಸನ್ ಎಂಬ ಮಹಿಳೆಯ ತಾಯಿಯ ಅಂತ್ಯಕ್ರಿಯೆಯೂ ಇದೇ ಫ್ಯೂನರಲ್ ಹೋಂನಲ್ಲಿ ನಡೆದಿತ್ತು ಎನ್ನಲಾಗಿದೆ. ಫ್ಯೂನರಲ್ ಹೋಂನಲ್ಲಿನ ಪರಿಸ್ಥಿತಿಯ ಕುರಿತು ಮರುದಿನವೇ ಮಾಹಿತಿ ಲಭಿಸಿದ್ದು, ಇದು ತಮಗೆ ಅತ್ಯಂತ ನೋವಿನ ಹಾಗೂ ಗೊಂದಲಮಯ ಅನುಭವವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಘಟನೆ ಬಳಿಕ ಫ್ಯೂನರಲ್ ಹೋಂ ನಿರ್ವಾಹಕಿ ಜೋನ್ನಾ ಮಾರ್ಗನ್ ಅವರ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಶವಗಳನ್ನು ಅತ್ಯಂತ ಕಳಪೆ ಮತ್ತು ಅಮಾನವೀಯ ಪರಿಸ್ಥಿತಿಗಳಲ್ಲಿ ಇರಿಸಲಾಗಿತ್ತು. ಫ್ಯೂನರಲ್ ಹೋಂನಲ್ಲಿ ಇಲಿಗಳ ಹಾವಳಿಯೂ ಕಂಡುಬಂದಿದೆ ಎನ್ನಲಾಗಿದೆ. ಇನ್ನೂ ಆಘಾತಕಾರಿ ವಿಚಾರವೆಂದರೆ, ಫ್ಯೂನರಲ್ ಹೋಂನೊಂದಿಗೆ ಸಂಬಂಧ ಹೊಂದಿದ್ದ ಕ್ಲಾರ್ಕ್ ಮಾರ್ಗನ್ ಅವರ ಪರವಾನಗಿಯನ್ನು 2024ರಲ್ಲೇ ರದ್ದುಗೊಳಿಸಲಾಗಿತ್ತು ಎನ್ನಲಾಗಿದೆ. ಈ ದಂಪತಿ ಈ ಹಿಂದೆ ಸ್ಮಶಾನವೊಂದನ್ನು ನಡೆಸುತ್ತಿದ್ದರು. ಕುಟುಂಬಗಳಿಗೆ ನೂರಾರು ಚಿತಾಭಸ್ಮಗಳನ್ನು ಹಿಂತಿರುಗಿಸದಿರುವುದು ಹಾಗೂ ಶವಗಳನ್ನು ಅಸಮರ್ಪಕ ರೀತಿಯಲ್ಲಿ ಸಂಗ್ರಹಿಸಿರುವ ಆರೋಪಗಳ ಹಿನ್ನೆಲೆಯಲ್ಲಿ ಆ ಸ್ಮಶಾನವನ್ನು ಮುಚ್ಚಲಾಗಿತ್ತು. ಪ್ರಸ್ತುತ ಪ್ರಕರಣದಲ್ಲಿ ಪತ್ತೆಯಾಗಿರುವ 56 ಶವಗಳ ಗುರುತು, ಅವುಗಳನ್ನು ಎಷ್ಟು ದಿನಗಳಿಂದ ಸೂಕ್ತ ವ್ಯವಸ್ಥೆಯಿಲ್ಲದೆ ಇರಿಸಲಾಗಿತ್ತು ಹಾಗೂ ಈ ನಿರ್ಲಕ್ಷ್ಯಕ್ಕೆ ಕಾರಣವೇನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.