ಶ್ರೀಲಂಕಾ, ಆ. 06 (DaijiworldNews/TA): ಶ್ರೀಲಂಕಾದ ಹೆರಿಟೇಜ್ ಕೈಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಗಳ ಸಹಯೋಗದೊಂದಿಗೆ ಆ.1 ಮತ್ತು 2 ರಂದು ಶ್ರೀಲಂಕಾದ ಮಾತಾರಾ ಬೀಚ್ನಲ್ಲಿ ಸಿರಾಸಾ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಿತ್ತು. ಇನ್ನು ಈ ಗಾಳಿಪಟ ಉತ್ಸವದಲ್ಲಿ ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ಹವ್ಯಾಸೀ ಗಾಳಿಪಟ ತಂಡವಾದ ‘ ಟೀಮ್ ಮಂಗಳೂರು ’ ಗೆ ಆಹ್ವಾನ ಬಂದಿದ್ದು , ತಂಡದ ವಿ. ಕೆ. ಸನಿಲ್, ದಿನೇಶ್ ಹೊಳ್ಳ, ಪ್ರಾಣೇಶ್ ಕುದ್ರೋಳಿ ಈ ಉತ್ಸವದಲ್ಲಿ ಭಾಗವಹಿಸಿದ್ದರು.





ವಿವಿಧ ದೇಶಗಳ ನಡುವೆ ಪರಸ್ಪರ ಸಾಂಸ್ಕೃತಿಕ ವಿನಿಯೋಗ, ಹಂಚಿಕೆ ಮತ್ತು ಸ್ನೇಹ ಒಡನಾಟಗಳ ಹಂಚಿಕೆಯ ದ್ಯೋತಕದೊಂದಿಗೆ ಈ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಜನರು ಬಹಳ ಉತ್ಸಾಹದಿಂದ ತಮ್ಮ ಸಾಂಪ್ರದಾಯಿಕ ಶೈಲಿಯ ಹಲವಾರು ಬೃಹತ್ ಗಾಳಿಪಟಗಳನ್ನು ಮಾಡಿ ಅದನ್ನು ವಿಭಿನ್ನ ಶಾಲಿಯಲ್ಲಿ ಹಾರಿಸುವ ತಂತ್ರಗಾರಿಕೆಯು ಈ ಗಾಳಿಪಟ ಉತ್ಸವದ ವಿಶೇಷವಾಗಿತ್ತು.
ಟೀಮ್ ಮಂಗಳೂರು ತಂಡವು ಈ ಹಿಂದೆ ಭಾರತೀಯ ಸಾಂಸ್ಕೃತಿಕ ಚಿತ್ತಾರಗಳ ಗಾಳಿಪಟಗಳನ್ನು ಜಗತ್ತಿನ 12 ದೇಶಗಳ ಅಂತರ್ ರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಹಾರಿಸಿ ನಮ್ಮ ದೇಶದ ಕೀರ್ತಿ ಪತಾಕೆಯ ತೋರಣವನ್ನು ಬಾನಂಚಿನಲ್ಲಿ ಬೆಳಗಿಸಿರುತ್ತದೆ.