ನವದೆಹಲಿ, ಆ. 04 (DaijiworldNews/AA): ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಉನ್ನತ ಉಗ್ರನೊಬ್ಬ, ಪಾಕಿಸ್ತಾನದ ಒಳಗೆಯೇ ಅಜ್ಞಾತ ವ್ಯಕ್ತಿಯೊಬ್ಬ ತನ್ನ ಸಂಘಟನೆಯ ಸುಮಾರು 30 ಮಂದಿ ಸದಸ್ಯರನ್ನು ಹತ್ಯೆ ಮಾಡಿದ್ದಾನೆ ಎಂದು ಬಹಿರಂಗವಾಗಿ ತಿಳಿಸಿದ್ದಾನೆ.

ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ನಂಟಿರುವ ಭಯೋತ್ಪಾದಕ ರಿಜ್ವಾನ್ ಹನೀಫ್ ಕಾಣಿಸಿಕೊಂಡಿದ್ದಾನೆ.
2008ರ ಮುಂಬೈ ದಾಳಿಯಲ್ಲಿ 166 ಜನರ ಸಾವಿಗೆ ಕಾರಣವಾದ ಈ ನಿಷೇಧಿತ ಸಂಘಟನೆಯ ಹಲವು ಸದಸ್ಯರು, ಕಳೆದ ಮೂರರಿಂದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದೆಡೆ ವಿವಿಧ ಭಾಗಗಳಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಹನೀಫ್ ವಿಡಿಯೋದಲ್ಲಿ ತಿಳಿಸಿದ್ದಾನೆ.