ಅಥೆನ್ಸ್, ಆ. 03 (DaijiworldNews/TA): ಗ್ರೀಸ್ ರಾಜಧಾನಿ ಅಥೆನ್ಸ್ನ ಪಶ್ಚಿಮ ಭಾಗದಲ್ಲಿ ಉರಿಯುತ್ತಿರುವ ಭೀಕರ ಕಾಡ್ಗಿಚ್ಚನ್ನು ನಿಯಂತ್ರಿಸುವ ಕಾರ್ಯಾಚರಣೆ ವೇಳೆ ಎರಡು ಅಗ್ನಿಶಾಮಕ ಹೆಲಿಕಾಪ್ಟರ್ಗಳು ಗಗನದಲ್ಲೇ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರು ಸಿಬ್ಬಂದಿ ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ.

ಅಥೆನ್ಸ್ನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಪೋರ್ಟೊ ಜೆರ್ಮೆನೊ ಸಮೀಪದ ಪ್ಸಾಥಾ ಅರಣ್ಯ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ. 'ಬೆಲ್' ಮಾದರಿಯ ಎರಡು ಹೆಲಿಕಾಪ್ಟರ್ಗಳು ಅತ್ಯಂತ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿ ಕಾಡ್ಗಿಚ್ಚಿನ ಮೇಲೆ ನೀರು ಸಿಂಪಡಿಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿಯಾಗಿವೆ. ಡಿಕ್ಕಿಯ ಪರಿಣಾಮ ಒಂದು ಹೆಲಿಕಾಪ್ಟರ್ಗೆ ಬೆಂಕಿ ಹೊತ್ತಿಕೊಂಡು ನೆಲಕ್ಕೆ ಪತನಗೊಂಡಿದ್ದು, ಮತ್ತೊಂದು ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡುವಲ್ಲಿ ಯಶಸ್ವಿಯಾಗಿದೆ.
ಅಪಘಾತಕ್ಕೀಡಾದ ಹೆಲಿಕಾಪ್ಟರ್ನಲ್ಲಿದ್ದ ಗ್ರೀಕ್ ಮೂಲದ ಅಗ್ನಿಶಾಮಕ ಅಧಿಕಾರಿ ಹಾಗೂ ಡೆನ್ಮಾರ್ಕ್ ಮೂಲದ ಪೈಲಟ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಂದು ಹೆಲಿಕಾಪ್ಟರ್ನಲ್ಲಿದ್ದ ಬ್ರಿಟನ್ ಮೂಲದ ಪೈಲಟ್ ಹಾಗೂ ಗ್ರೀಕ್ ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರೀಸ್ನಲ್ಲಿ ಪ್ರಸ್ತುತ ಗಂಟೆಗೆ ಸುಮಾರು 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ತೀವ್ರ ಉಷ್ಣಾಂಶದ ಕಾರಣ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ವ್ಯಾಪಿಸುತ್ತಿದೆ. ಹೊಗೆಯಿಂದ ರಸ್ತೆ ಮಾರ್ಗಗಳು ಆವರಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ನೂರಾರು ನಿವಾಸಿಗಳನ್ನು ನೌಕೆಗಳು ಮತ್ತು ಬೋಟ್ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಘಟನೆ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್, "ಈ ಪರಿಸ್ಥಿತಿ ಮಾನವನ ಸಿದ್ಧತೆ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವನ್ನೂ ಮೀರಿದ ವಿಕೋಪವಾಗಿ ಪರಿಣಮಿಸಿದೆ" ಎಂದು ಹೇಳಿದ್ದಾರೆ. ಗ್ರೀಸ್ ಮಾತ್ರವಲ್ಲದೆ ಫ್ರಾನ್ಸ್ ಹಾಗೂ ಸ್ಪೇನ್ ದೇಶಗಳಲ್ಲಿಯೂ ವ್ಯಾಪಕ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಲಕ್ಷಾಂತರ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಗ್ರೀಸ್ನಲ್ಲಿ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚು ಸಾಮಾನ್ಯವಾಗಿದ್ದರೂ, ಈ ಬಾರಿಯ ಬೆಂಕಿಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟದ ತುರ್ತು ಸಹಾಯ ವ್ಯವಸ್ಥೆಯಡಿ ಡೆನ್ಮಾರ್ಕ್, ಬ್ರಿಟನ್, ಫ್ರಾನ್ಸ್ ಮತ್ತು ರೊಮೇನಿಯಾದ ವೈಮಾನಿಕ ತಂಡಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿವೆ. 2018ರಲ್ಲಿ ಗ್ರೀಸ್ನ ಮಾತಿ ಪ್ರದೇಶದಲ್ಲಿ ಸಂಭವಿಸಿದ್ದ ಭೀಕರ ಕಾಡ್ಗಿಚ್ಚಿನಲ್ಲಿ 104 ಮಂದಿ ಮೃತಪಟ್ಟಿದ್ದರು. ಇದೀಗ ಅಥೆನ್ಸ್ ಸುತ್ತಮುತ್ತಲಿನ ಅರಣ್ಯದಲ್ಲಿ ವ್ಯಾಪಿಸುತ್ತಿರುವ ಬೆಂಕಿಯು ಮತ್ತೆ ಅದೇ ರೀತಿಯ ಭೀಕರ ಅನಾಹುತದ ಭೀತಿಯನ್ನು ಉಂಟುಮಾಡಿದೆ.