ಜಕಾರ್ತಾ, ಆ. 02 (DaijiworldNews/AA): ಇಂಡೋನೇಷ್ಯಾದ ಮಧುರಾ ದ್ವೀಪದ ಬಳಿ 271 ಜನರಿದ್ದ ಫರ್ರಿಯಲ್ಲಿ ದಿಢೀರ್ ಅಗ್ನಿ ಅವಘಡ ಸಂಭವಿಸಿದ್ದು, ಐವರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ 41 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಸಂಸ್ಥೆ ತಿಳಿಸಿದೆ.

ಮಧುರಾ ದ್ವೀಪದಿಂದ ಹೊರಟಿದ್ದ ಫರ್ರಿಯಲ್ಲಿ ಮಧ್ಯಾಹ್ನ ದಿಢೀರ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ ದೋಣಿಯಲ್ಲಿದ್ದ ಪ್ರಯಾಣಿಕರು ಪ್ರಾಣಭಯದಿಂದ ನೀರಿಗೆ ಜಿಗಿದಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಕ್ಷಣಾ ತಂಡಗಳು ಹಾಗೂ ಸಮೀಪದಲ್ಲಿದ್ದ ಹಡಗಿನಲ್ಲಿದ್ದವರು ಫರ್ರಿಯಲ್ಲಿದ್ದ ಹಲವರನ್ನು ರಕ್ಷಿಸಿದ್ದಾರೆ. ನಾಪತ್ತೆಯಾದವರಿಗಾಗಿ ಸಮುದ್ರದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಅಗ್ನಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ನೌಕಾಪಡೆ ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಹಲವರನ್ನು ರಕ್ಷಿಸಿದ್ದಾರೆ. ಆದರೆ ಐದು ಜನರ ಶವಗಳು ಸಮುದ್ರದಲ್ಲಿ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಫರ್ರಿ ಪೂರ್ವ ಜಾವಾ ಪ್ರಾಂತ್ಯದ ಸುರಬಯಾದಿಂದ ದಕ್ಷಿಣ ಸುಲವೇಸಿಯ ಮಕಾಸ್ಸರ್ಗೆ ತೆರಳುತ್ತಿತ್ತು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಫರ್ರಿಯ ಇಂಜಿನ್ನಲ್ಲಾದ ತಾಂತ್ರಿಕ ದೋಷ ಹಾಗೂ ಶಾರ್ಟ್ ಸರ್ಕ್ಯೂಟ್ ಬೆಂಕಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ.